ಲೋಕಲ್ ನ್ಯೂಸ್
ಕವಿತಾ ಸಾಲಿಮಠ ಇವರಿಗೆ ಕೃತಿರತ್ನ ಪ್ರಶಸ್ತಿ
ಬಾಗಲಕೋಟೆ: ಡಾ. ಪಂ. ಪುಟ್ಟರಾಜ ಗುರುಗಳ ಸಾಹಿತ್ಯ ಸೇವಾ ಸ್ಮರಣೆಗಾಗಿ ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು 23 ವರ್ಷಗಳಿಂದ ಅರ್ಪಿಸುತ್ತಾ ಬಂದಿರುವ ಡಾ. ಪಂ. ಪುಟ್ಟರಾಜ ಸಾಹಿತ್ಯ “ಕೃತಿರತ್ನ” ಪ್ರಶಸ್ತಿಗೆ ಮನ್ವಂತರ, ತೋರಣಗಲ್ಲು ಪ್ರಕಾಶನದಿಂದ ಪ್ರಕಟವಾದ ಕವಿತಾ ಸಾಲಿಮಠ ಇವರ “ದರ್ದಿಗೆ ದಾಖಲೆಗಳಿಲ್ಲ” ಗಜಲ್ ಕೃತಿ ಆಯ್ಕೆ ಆಗಿದೆ. ಕವಿತಾ ಸಾಲಿಮಠ ರವರು “ಕೃತಿರತ್ನ” ಬಹುಮಾನವನ್ನು ಪಡೆದ ಬಾಗಲಕೋಟೆ ಜಿಲ್ಲೆಯ ಮೊದಲ ಕವತ್ರಿಯಾಗಿದ್ದು ಇವರ ಮೊದಲ ಕೃತಿಯೇ ರಾಜ್ಯಮಟ್ಟದ ಶ್ರೇಷ್ಠ ಕೃತಿಯಾಗಿ ಪ್ರಶಸ್ತಿ ಪಡೆದದ್ದು ಬಾಗಲಕೋಟೆ ಜಿಲ್ಲೆಯ ಗಜಲ್ ಸಾಹಿತ್ಯದ ಹಿರಿಯ ಕಿರಿಯ ಕವಿಗಳಿಗೆ ಸಂತಸದ ಕ್ಷಣವಾಗಿದೆ.
01 ಅಕ್ಟೋಬರ್ 2023 ರಂದು ಬೆಳಗಾವಿಯ ಸರಸ್ವತಿ ವಾಚನಾಲಯದಲ್ಲಿ ಹಮ್ಮಿಕೊಂಡಿರುವ ‘ಪದ್ಮಭೂಷಣ’ ಡಾ. ಪಂ. ಪುಟ್ಟರಾಜ ಗುರು ಭಕ್ತಿ ಸಾಹಿತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನಾಡಿನ ಗಣ್ಯ ಮಾನ್ಯರು ಸಾಹಿತಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇದೇ ಸಂದರ್ಭದಲ್ಲಿ, ಸಾಹಿತ್ಯದ ವಿವಿಧ ಪ್ರಕಾರದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಕೃತಿ ಕರ್ತರಿಗೂ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ “ಕೃತಿರತ್ನ” ಪ್ರಶಸ್ತಿ ಸಮ್ಮಾನ ನೀಡಿ ಗೌರವಿಸಲಾಗುವುದು.
ಡಾ. ಪಂ. ಪುಟ್ಟರಾಜ ಸಾಹಿತ್ಯ “ಕೃತಿರತ್ನ” ಪ್ರಶಸ್ತಿ ಆಯ್ಕೆಗಾಗಿ ರಾಜ್ಯಾಧ್ಯಕ್ಷ ಚನ್ನವೀರ ಸ್ವಾಮಿ ಹಿರೇಮಠ ನೇತೃತ್ವದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಅನ್ನದಾನಿ ಹಿರೇಮಠ, ನಿವೃತ್ತ ಪ್ರಾಧ್ಯಾಪಕಿ ಡಾ. ಶಕುಂತಲಾ ಸಿಂಧೂರ, ಉಪನ್ಯಾಸಕಿ ಡಾ.ರಶ್ಮಿ ಅಂಗಡಿ, ಮಕ್ಕಳ ಸಾಹಿತಿ ಡಾ.ತಯಬಲಿ ಹೊಂಬಳ ಮತ್ತು ಸೇವಾ ಸಮಿತಿಯ ಎಫ್. ಎ. ಹಿರೇಮಠ ಇವರುಗಳನ್ನು ಒಳಗೊಂಡ 5 ಜನ ಸದಸ್ಯರ ಸಮಿತಿ ರಚಿಸಲಾಗಿತ್ತು.






