ಕವಿತೆ
“ನಾನು ಅವಳನ್ನ ಎಲೆಗಳಂತೆಯೇ ಪ್ರೀತಿಸಿಬಿಟ್ಟೆ”
Photo from Internet. ಕೆಳಗಿರುವ ಪಟ ಯುರೋಪ್ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ವಿಲೋ ಮರದ ಎಲೆಗಳು.
“ನಾನು ಅವಳನ್ನ ಎಲೆಗಳಂತೆಯೇ ಪ್ರೀತಿಸಿಬಿಟ್ಟೆ”
ನಾನು ಅವಳನ್ನ
ಥೇಟ್ ಎಲೆಗಳನ್ನ ಪ್ರೀತಿಸಿದಂತೆಯೇ
ಪ್ರೀತಿಸಿಬಿಟ್ಟೆ,
ಬೆಳಕಿನಲಿ ಬೆಳ್ಳಗೆ ಹೊಳೆವ
ವಸಂತದ ಸೊಂಪಾದ ಹಸಿರೆಲೆಗಳವು,
ಅದೆ ನಾವು ನಡೆದುಹೋದ
ತೀರದಡಿಯ ಆ ತಾಣದಲ್ಲಿ
ಆಗತಾನೆ ವಿಲೋಮರದಿಂದ ಕೆಳಗುರುಳಿದ್ದವು,
ಹಾ… ಅವಳು
ಇದೆ ಲೋಕದಲ್ಲಿದ್ದಾಗಲೇ
ಅವಳನ್ನ ನಂಬಿ
ನಾನು ನನ್ನ ಬದುಕು ಕಟ್ಟಿಕೊಂಡೆ.
ಆದರೆ
ಮನುಷ್ಯ
ಈ ಲೋಕದ ನಿಯಮಗಳನ್ನು
ಮೀರಿ ನಡೆಯಲು ಸಾಧ್ಯವಿಲ್ಲ.
ಮಂದವಾಗಿ ಮಿನುಗುವ
ವಿಶಾಲ ಬಯಲುಗಳು
ಬಿಳಿಮೋಡದ ನೆರಳಲ್ಲಿ ಮರೆಯಾದಂತೆ,
ಬಿಳಿದಾದ ಸಿಲ್ಕ್ ಸ್ಕಾರ್ಫ್
ತೊಟ್ಟ ಅವಳು,
ನಮ್ಮ ಲೋಕದಿಂದ ಮರೆಯಾಗುವ
ಮುಳುಗು ಸೂರ್ಯನ ಹಾಗೆ
ಬೆಳಕಿನ ಹಕ್ಕಿಯಂತೆಯೇ ಹಾರಿಹೋದಳು.
ನನಗಾಗಿ
ಅವಳು ಬಿಟ್ಟುಹೋದ
ಉಡುಗೊರೆಯೊಂದೇ – ಆ ಮಗು.
ಅವನು ಹಸಿವಿನಿಂದ ಅಳುತ್ತಾನೆ;
ಆದರೆ ಅವನಿಗೆ ಕೊಡಬಹುದಾದ
ಯಾವುದನ್ನೂ ನಾನು ನೀಡಲು
ಅಸಹಾಯಕನಾಗಿದ್ದೇನೆ.
ಅವನನ್ನು ಎತ್ತಿ
ನನ್ನ ಮಡಿಲಲ್ಲಿ ಮಲಗಿಸುತ್ತೇನೆ.
ನಾನು ಮತ್ತು ನನ್ನ ಮಡದಿ
ಒಂದಾಗಿ ಮಲಗುತ್ತಿದ್ದ
ದಿಂಬುಗಳ ಮೇಲೆ,
ಅವಳಿಲ್ಲದ ಈ ಇಡೀ ಹಗಲನ್ನು
ದಾರಿಕಾಣದೆ ಒಬ್ಬಂಟಿಯಾಗಿ
ಸಂಜೆಯವರೆಗೂ ಕಳೆಯುತ್ತೇನೆ.
ಕಾರಿರುಳು ಮುಂಜಾವಿನವರೆಗೂ
ನಿಟ್ಟುಸಿರು ಬಿಡುತ್ತಲೇ ಇರುತ್ತದೆ.
ದುಃಖಿಸುತ್ತೇನೆ
ಅಷ್ಟೇ ಸಂಕಟಪಡುತ್ತೇನೆ
ಯಾವ ಪರಿಹಾರವೂ ಇಲ್ಲವೆಂದು.
ತೀವ್ರ ವೇದನೆಯಿಂದ ಬಳಲುತ್ತೇನೆ
ಅವಳನ್ನು ಮತ್ತೆ ಕಾಣುವ
ದಾರಿಯೇ ಇಲ್ಲವೆಂದು.
I loved her like the leaves,
The lush green leaves of spring
That pulled down the willows
on the bank’s edge
where we walked
while she was of this world
I built my life on her.
But man cannot flout the laws of this world.
To the shimmering wide fields
hidden by the white cloud,
White as a white silk scarf
She soared away like the morning bird
hidden from our world like the setting sun.
The child – the gift she left behind-
He cries for food; but always
finding nothing that I might give him.
I pick him up and hold him in my arms.
On the pillows where we lay,
My wife and I, as one,
I pass the daylight lonely ’til the dusk.
The black night sighing ’til the dawn.
I grieve and I grieve and know no remedy.
I ache and know no road where I might meet her.
ಮೂಲ: ಕಕಿನಮೋಟೋ ನೊಹಿಟೋಮೋರೂ
(Kakinomoto no Hitomaro)

ಅನುವಾದ: ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ





