ಕರ್ನಾಟಕ
ಆಗಸ್ಟ್ 27 ರಂದು ರಾಜ್ಯಾದ್ಯಂತ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕುರಿತು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಆಗಸ್ಟ್ 27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು. ಇದೇ ವೇಳೆ, ರಾಜ್ಯದ ಒಟ್ಟು 11 ಸಾವಿರ ಕಡೆಗಳಲ್ಲಿ ಏಕಕಾಲಕ್ಕೆ ಯೋಜನೆ ನೀಡಲಾಗುವುದು ಎಂದರು.
ಯೋಜನೆ ಉದ್ಘಾಟನೆ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜೊತೆ ಸಭೆ ನಡೆಸಿದ ನಂತರ ವಿಧಾನಸೌಧದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಉದ್ಘಾಟನಾ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಲಾಗಿದೆ ಎಂದರು.
ರಾಜ್ಯದ 11 ಸಾವಿರ ಕಡೆ ಏಕಕಾಲಕ್ಕೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಎಲ್ಲಾ ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಲ್ಲಿ ಉದ್ಘಾಟನೆ ನಡೆಯಲಿದೆ. ಪಂಚಾಯಿತಿಗೊಬ್ಬ ನೋಡಲ್ ಆಫೀಸರ್ ನೇಮಕ ಮಾಡಿದ್ದೇವೆ. ಪಕ್ಷಾತೀತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಎಲ್ಲರಿಗೂ ಅನುಕೂಲ ಆಗಲೆಂದು ಭಾನುವಾರ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಹೀಗಾಗಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಗೃಹಲಕ್ಷ್ಮೀ ಯೋಜನೆಗೆ ಈವರೆಗೆ 1.5 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಗೆ ನೋಂದಣಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇಲ್ಲ. ಯಾವಾಗ ಬೇಕಾದರೂ ನೋಂದಣಿಗೆ ಅವಕಾಶ ಇದೆ ಎಂದು ಡಿಸಿಎಂ ತಿಳಿಸಿದರು.






