Connect with us

ಕರ್ನಾಟಕ

ಯಾರ್‌ ರೀ ಪ್ರತಾಪ್‌ ಸಿಂಹ? ಅವರಿಗೂ ವರುಣಾಕ್ಕೂ ಏನ್‌ ಸಂಬಂಧ? ಸಿದ್ದರಾಮಯ್ಯ ಕಿಡಿ

Published

on

ಮೈಸೂರು: ಪ್ರತಾಪ್‌ ಸಿಂಹ ಯಾರ್‌ ರೀ? Who is Pratap Simha? ಅವರಿಗೂ ವರುಣಾಕ್ಕೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಮೂಲಕ ಪ್ರಚಾರ ಮಾಡಲ್ಲ ಎಂದು ಪ್ರಚಾರ ಮಾಡುತ್ತಿದ್ದೀರಿ, ಈ ಭಯ ಇರಬೇಕು ಎಂದು ಹೇಳಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹಗೆ ತಿರುಗೇಟು ನೀಡಿದ್ದಾರೆ. ಬೆಳಗ್ಗೆ ಟ್ವೀಟ್‌ ಮಾಡಿದ್ದ ಪ್ರತಾಪ್‌ ಸಿಂಹ ಸಿದ್ದರಾಮಯ್ಯ ಅವರ ಪ್ರಚಾರದ ಬಗ್ಗೆ ವ್ಯಂಗ್ಯವಾಡಿದ್ದರು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ದ್ವೇಷದಿಂದ ರಾಜಕಾರಣ ಮಾಡಿದರೆ ಜನರು ಎಂದಿಗೂ ಒಪ್ಪುವುದಿಲ್ಲ. ವರುಣ ಕ್ಷೇತ್ರದ ಜನರಿಗೆ ನನ್ನ ಮೇಲೆ ಪ್ರೀತಿಯಿದೆ. ಜನರ ಮನಸ್ಸನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಹೇಳಿದರು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಸಂಚಾರ, ತರಾಟೆಗೆ ತೆಗೆದುಕೊಂಡ ಕುಪ್ಯ ಗ್ರಾಮಸ್ಥರು 1978 ರಿಂದಲೂ ನಾನು ವರುಣಾದಲ್ಲಿ ಸ್ಪರ್ಧೆ ಮಾಡಿದ್ದೇನೆ. ಇಲ್ಲಿನ ಜನ ನನ್ನನ್ನು ಕಾನ್ಫಿಡೆಂಟ್ ಆಗಿ ಇರಿ ಎಂದಿದ್ದಾರೆ. ವರುಣಾದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ಬಿಎಲ್ ಸಂತೋಷ್ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆರ್‌ಎಸ್‌ಎಸ್‌ನವರು, ಬಿಜೆಪಿಯವರು ರಾಜಕೀಯ ದ್ವೇಷದಿಂದ ನನ್ನನ್ನು ಸೋಲಿಸಲೇಬೇಕು ಎಂದು ನಿಂತಿದ್ದಾರೆ. ಸಂತೋಷ್ ಅವರೇನು ಇಲ್ಲಿನ ಮತದಾರರಲ್ಲ ಎಂದರು.

ಸಿದ್ದರಾಮಯ್ಯಗೆ ಸೋಲುವ ಭೀತಿ ಎದುರಾಗಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಅವರು ತಮ್ಮ ಕ್ಷೇತ್ರ ನೋಡಿಕೊಳ್ಳಲು ಹೇಳಿ ಎಂದು ತಿರುಗೇಟು ನೀಡಿದ ಸಿದ್ದರಾಮಯ್ಯ, ವರುಣ ಕ್ಷೇತ್ರದ ಬಗ್ಗೆ ನನಗೆ ಆತಂಕ ಇದೆ ಎಂಬುದು ಸುಳ್ಳು. ಕೊನೆಯ ಎರಡು ದಿನ ಕೂಡ ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದರು.

ವರುಣಾ ಕ್ಷೇತ್ರದಲ್ಲಿ ಸಿದ್ದು ಅಬ್ಬರದ ಪ್ರಚಾರ!

ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿದ್ದರಾಮಯ್ಯ ಶನಿವಾರ ಅಬ್ಬರದ ಪ್ರಚಾರ ನಡೆಸಿದರು. ಕಾರ್ಯ ಗ್ರಾಮದ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಸಿದ್ದರಾಮೇಶ್ವರನ ದರ್ಶನ ಪಡೆದರು. 2013ರಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿದ್ದ ಬಿಎಸ್‌ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿಯವರ ಸ್ವಗ್ರಾಮವಾಗಿರುವ ಕಾರ್ಯ ಗ್ರಾಮದಲ್ಲಿ ಗ್ರಾಮಸ್ಥರು ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.

ಕಾರ್ಯ ಗ್ರಾಮದಲ್ಲಿ ಸಿದ್ದರಾಮಯ್ಯ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಸಿದ್ದರಾಮಯ್ಯಗೆ ಕಾರ್ಯ ಗ್ರಾಮಸ್ಥರು ಹೂವಿನ ಮಳೆಗೈದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ, ಚಿತ್ರನಟ ಸಾಧುಕೋಕಿಲ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಥ್‌ ನೀಡಿದರು.

ಮತ್ತೆ ಮುನ್ನೆಲೆಗೆ ಬಂದ ಮುಂದಿನ ಸಿಎಂ ಸಿದ್ದರಾಮಯ್ಯ ಕೂಗು!

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದ ವೇಳೆ ಕಾರ್ಯಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಅವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಯನ್ನು ಕೂಗಿದರು. ಇದರಿಂದ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

Home
Videos
Shop
error: Content is protected !!