Connect with us

ಕರ್ನಾಟಕ

ನನ್ನ ಬದುಕಿನ ಹಸಿವು, ಬಡತನದ ಅನುಭವದಿಂದಲೇ ಅನ್ನಭಾಗ್ಯ ಜಾರಿ : ಸಿದ್ದರಾಮಯ್ಯ

Published

on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆ ಯೋಜನೆ ಅನ್ನಭಾಗ್ಯಕ್ಕೆ ಸೋಮವಾರ 10 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡಿರುವ ಸಿದ್ದರಾಮಯ್ಯ, ನಾನು ನನ್ನ ಬದುಕಿನಲ್ಲಿ ಅನುಭವಿಸಿದ ಹಸಿವು, ಬಡತನದ ಅನುಭವದಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಸದಾಶಯದೊಂದಿಗೆ ಬಡ ಕುಟುಂಬಗಳಿಗೆ ತಲಾ 5 ಕೆ ಜಿ ಆಹಾರ ಧಾನ್ಯವನ್ನು ವಿತರಣೆ ಮಾಡುವ ಯೋಜನೆಯನ್ನು ಜುಲೈ 10, 2013ರಂದು ಜಾರಿಗೊಳಿಸಿ, ನಾಡಿನ ಹಸಿದವರಿಗೆ ನೆಮ್ಮದಿಯ ಅನ್ನ ನೀಡಿದ್ದೆ ಎಂದು ತಿಳಿಸಿದ್ದಾರೆ.

ನಮ್ಮ ಈ ಯೋಜನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಆರ್ಥಿಕ – ಸಾಮಾಜಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಶ್ಲಾಘಿಸಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ನಾಡಿನ ಜನತೆ ವಿಶ್ವಾಸವಿರಿಸಿ ನೀಡಿದ್ದ ರಾಜಕೀಯ ಅಧಿಕಾರವನ್ನು ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸದ್ಬಳಕೆ ಮಾಡಿಕೊಂಡ ಸಂತೃಪ್ತಿ ನನ್ನದು ಎಂದು ಹೇಳಿದ್ದಾರೆ.

ಇನ್ನು ಸಿಎಂ ಆಫ್‌ ಕರ್ನಾಟಕದ ಟ್ವೀಟ್‌ ಖಾತೆಯಿಂದಲೂ ಟ್ವೀಟ್‌ ಮಾಡಿದ್ದು, ಹಸಿವಿನ ಬೇನೆ ನಾಡಿನ ಬಡ ಜನರನ್ನು ಬಾಧಿಸದಿರಲಿ ಎಂಬ ಸದುದ್ದೇಶದೊಂದಿಗೆ ನಾವು ಸೋಮವಾರದಿಂದ ‘ಅನ್ನಭಾಗ್ಯ’ ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ ಜಿ ಅಕ್ಕಿ ಹಾಗೂ 170 ರೂ. ನೀಡಲಿದ್ದೇವೆ. ಹೆಚ್ಚುವರಿ 5 ಕೆ ಜಿ ಅಕ್ಕಿಯ ಬದಲಿಗೆ ನೀಡುವ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಕೆ ಮಾಡಬೇಕೆಂದು ನಾಡ ಬಾಂಧವರಲ್ಲಿ ಮನವಿ ಮಾಡುತ್ತೇನೆ. ಹಸಿವಿನ ಸಂಕಟ ಅನುಭವಿಸಿದವರಿಗೆ ಮಾತ್ರ ಅರಿವಿರಲು ಸಾಧ್ಯ. ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Home
Videos
Shop
error: Content is protected !!