ಕರ್ನಾಟಕ
ಮುಸ್ಲಿಮರ ಉಪವಾಸದ ಭಕ್ತಿಗೆ ಮೀಸಲಾತಿ ರದ್ದುಗೊಳಿಸಿದ ಬಿಜೆಪಿ ಬೆಂದು ಹೋಗುತ್ತದೆ: ಎಚ್.ಡಿ. ರೇವಣ್ಣ
ಬೇಲೂರು (ಹಾಸನ) : ಮುಸ್ಲಿಮರ ಉಪವಾಸದ ಸಂದರ್ಭದಲ್ಲಿ ಅವರ ಮೀಸಲಾತಿ ತೆಗೆದಿರುವುದು ನಿಜಕ್ಕೂ ಬೇಸರದ ಸಂಗತಿ. ಅವರ ಭಕ್ತಿಯ ಮೂಲಕವೇ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಬೇಲೂರು ಚೆನ್ನಕೇಶವ ರಥೋತ್ಸವದಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಮಾಡದ ಅಭಿವೃದ್ಧಿ ಕಾರ್ಯಗಳನ್ನು, ಅಲ್ಪಾವಧಿಯಲ್ಲಿ ಬಂದ ಜೆಡಿಎಸ್ ಸರ್ಕಾರ ಮಾಡಿದೆ. ದೇವೇಗೌಡರು ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಆ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಿದ್ದು, ಅಂತಹ ಸಮಾಜವನ್ನು ತುಳಿಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.
ಉಪವಾಸವಿದ್ದಾಗಲೇ ಮೀಸಲಾತಿ ತೆಗೆದಿದ್ದಾರೆ
ಮುಸ್ಲಿಮರು ಕಠಿಣ ಉಪವಾಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೀಸಲಾತಿಯನ್ನ ತೆಗೆದು ಬೇರೆಯವರಿಗೆ ನೀಡುವುದು ಮುಂದೆ ಇವರ ಪತನಕ್ಕೆ ನಾಂದಿ ಹಾಡುತ್ತದೆ. ಅವರು ಮಾಡುತ್ತಿರುವ ಕಠಿಣ ಶ್ರಮ ಮತ್ತು ಭಕ್ತಿಯ ಪರಾಕಾಷ್ಟಿಯಲ್ಲಿ ಬಿಜೆಪಿ ಸರ್ವನಾಶ ಆಗುತ್ತೆ ಎಂದು ನುಡಿದರು.
ಶಾಸಕ ಲಿಂಗೇಶ್ ಪಾಪದ ಮನುಷ್ಯ
ಬೇಲೂರಿನ ಶಾಸಕ ಕೆ ಎಸ್ ಲಿಂಗೇಶ್ 750 ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ರೇವಣ್ಣ, “ಲಿಂಗೇಶ್ ಒಬ್ಬ ಪಾಪದ ಮನುಷ್ಯ. ಎರಡು ರಾಷ್ಟ್ರೀಯ ಪಕ್ಷಗಳು ಸಂಚು ರೂಪಿಸಿ ಶಾಸಕನನ್ನ ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ. ಬೇಲೂರಿಗೆ ಶಾಸಕರಾಗಿ ಬಂದ ಬಳಿಕ ಶಾಸಕರು ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಕಡತ ತೆಗೆದು ನೋಡಲಿ.
ದೇವೇಗೌಡರಿಗೆ ಮೋಸ ಮಾಡಿದವರಿಗೆ ಚನ್ನಕೇಶವ ಶಿಕ್ಷೆ ಕೊಡ್ತಾನೆ
ದೇವೇಗೌಡರಿಗೆ ಮೋಸ ಮಾಡಿ, ಹೋಗಿದ್ದಾರಲ್ಲ ಅವರಿಗೆ ಚೆನ್ನಕೇಶವ ದೇವರೇ ಒಂದಲ್ಲ ಒಂದು ದಿನ ಶಿಕ್ಷೆ ಕೊಡುತ್ತಾನೆ. ಅರಸೀಕೆರೆ ಶಾಸಕನನ್ನ ಗಿಣಿ ಸಾಕಿದ ಹಾಗೆ ಸಾಕಿದೆ. ಆತ ಮೋಸ ಮಾಡಿ ಹೋಗಿದ್ದಾನೆ. ಈಗ ಶಿರಸಿವರೆಗೆ ಹೋಗಿ ರಾಜೀನಾಮೆ ಕೊಡಕ್ಕೆ ಹೋಗಿದ್ದಾನೆ. ಕೊಡುವುದಾದರೆ ಎರಡು ವರ್ಷದ ಮೊದಲೇ ರಾಜಿನಾಮೆ ಕೊಡಬೇಕಿತ್ತು ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದರು.





