ಕೊಡಗು
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಿಂದ ಅಕ್ರಮ ಕಟ್ಟಡಗಳ ತೆರವು
✍️ದುಶ್ಯಂತ್ ಕುಮಾರ್, ಗಣಗೂರು
ಸೋಮವಾರಪೇಟೆ : ವರ್ಕ್ ಶಾಪ್ ಏರಿಯಾದಲ್ಲಿರುವ ಕೆಲ ವರ್ಕ್ ಶಾಪ್, ಅಂಗಡಿ ಮಳಿಗೆಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಕ್ತ ಪೋಲೀಸ್ ಭದ್ರತೆಯಲ್ಲಿ ತೆರವುಗೊಳಿಸಿದ ಘಟನೆ ಭಾನುವಾರ ಬೆಳಗ್ಗಿನ ಜಾವ ೪ ಗಂಟೆಗೆ ನಡೆದಿದೆ.
ಈ ಹಿಂದೆಯೇ ಪಟ್ಟಣ ಪಂಚಾಯಿತಿ ಮಾರ್ಕೆಟ್ ಏರಿಯಾದ ಸರ್ವೆ ನಂ.೧೯೪/೩ರಲ್ಲಿ ಮಾರ್ಕೆಟ್ ಏರಿಯಾದಲ್ಲಿರುವ ಕೆಲ ಕಟ್ಟಡಗಳನ್ನು ತೆರವುಗೊಳಿಸಿ ವಾಹನ ನಿಲುಗಡೆ ಮತ್ತು ಗ್ಯಾರೇಜ್ ನಿರ್ಮಿಸುವಂತೆ ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಮಾಲೀಕರಿಲ್ಲದೆ ಖಾಲಿ ಇರುವ ಮತ್ತು ಬಾಡಿಗೆ ಪಾವತಿಸದೆ ಇರುವವರು ಹಾಗು ಪರಭಾರೆ ಮಾಡಿಕೊಂಡವರೂ ಇದ್ದರು. ಈ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆ ಮಾಲೀಕರಿಗೆ ನೋಟೀಸು ನೀಡಿ ತೆರವುಗೊಳಿಸುವಂತೆ ಸೂಚಿಸಿದ್ದರು. ಇದರ ವಿರುದ್ದ ಅಂಗಡಿ ಪಡೆದುಕೊಂಡಿದ್ದವರು ಹೈಕೋರ್ಟ್ ಮೆಟ್ಟಲೇರಿದ್ದರು.
ಅರ್ಜಿದಾರರು ೧೫ ದಿನಗಳೊಳಗಾಗಿ ಪಟ್ಟಣ ಪಂಚಾಯಿತಿಗೆ ಆಕ್ಷೇಪಣೆಯನ್ನು ಸಲ್ಲಿಸಲು ನ್ಯಾಯಾಲಯದ ಅವಕಾಶ ನೀಡಿತ್ತು. ಆದರೆ ಅರ್ಜಿದಾರರು ನಿಗದಿತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಿರಲಿಲ್ಲ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸದೇ ಇದ್ದುದರಿಂದ ಶನಿವಾರ ಸಂಜೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲು ನಿರ್ಣಯ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗಿನ ಜಾವ ೪ಗಂಟೆಗೆ ತಹಸೀಲ್ದಾರ್ ನರಗುಂದ, ಪೋಲೀಸ್ ಇನ್ಸ್ಪೆಕ್ಟರ್‌ಗಳು, ಆರಕ್ಷಕ ಉಪನಿರೀಕ್ಷಕರು. ಜಿಲ್ಲಾ ಸಶಸ್ತ್ರ ಪಡೆ ಸಿಬ್ಬಂದಿಗಳ ಸಮ್ಮುಖದಲ್ಲಿ ಜೆಸಿಬಿ ಮೂಲಕ ೧೩ ಅಂಗಡಿ ಮಳಿಗೆಗಳನ್ನು ನೆಲಸಮ ಮಾಡಲಾಯಿತು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿ.ಕೆ.ಚಂದ್ರು, ವಾರ್ಡ್ ಸದಸ್ಯ ಮಹೇಶ್, ಮುಖ್ಯಾಧಿಕಾರಿ ನಾಚಪ್ಪ ಇದ್ದರು.





