Explore
ಗ್ಲಾಸ್ ಮೇಲೆ ಸ್ಕೈವಾಕ್ ಮಾಡಬೇಕೆ?: ಇನ್ನು ಕೊಡಗಿಗೆ ಬಂದರೆ ಸಾಕು
ಮನಮೋಹಕ ಪ್ರಾಕೃತಿಕ ಸೌಂದರ್ಯ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತದ ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಮತ್ತೊಂದು ಆಕರ್ಷಣೆ ಸೇರ್ಪಡೆ ಆಗಿದೆ. ಅದೇ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್. ಚೀನಾದಲ್ಲಿ ಗಾಜಿನ ಸೇತುವೆ ಮೇಲೆ ಪ್ರವಾಸಿಗರು ಸ್ಕೈವಾಕ್ ಮಾಡುವುದನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಆಗುವ ವಿಡಿಯೊಗಳಲ್ಲಿ ನೋಡಿರುತ್ತೀರಿ. ಅಂತಹದೇ ಸೇತುವೆಯೊಂದನ್ನು ಮಡಿಕೇರಿ – ತಲಕಾವೇರಿ ಮಾರ್ಗದ ಉಡೋತ್ ಮೊಟ್ಟೆಯಲ್ಲಿರುವ ಪಪ್ಪಿಸ್ ಪ್ಲಾಂಟೇಷನ್ ಐಸ್ ಲ್ಯಾಂಡ್‌ನಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಇದು ದಕ್ಷಿಣದ ಭಾರತದ ಎರಡನೇ ಗಾಜಿನ ಸೇತುವೆ ಆಗಿದೆ. ಕೇರಳದ ವಯನಾಡಿನಲ್ಲಿ ಇದೇ ರೀತಿಯ ಆದರೆ ಸಣ್ಣ ಪ್ರಮಾಣದ ಗಾಜಿನ ಸೇತುವೆ ಇದೆ. ಕೊಡಗಿನಲ್ಲಿ ನಿರ್ಮಿಸಿರುವ ಗಾಜಿನ ಸೇತುವೆಯು 32 ಮೀಟರ್ ಉದ್ದ ಇದೆ. ನೆಲದಿಂದ 74 ಅಡಿ ಎತ್ತರದಲ್ಲಿ ನಿರ್ಮಿಸಿರುವ ಈ ಸೇತುವೆ 33 ಮಿಲಿ ಮೀಟರ್ ದಪ್ಪನೆಯ ಗಾಜನ್ನು ಬಳಸಲಾಗಿದೆ. ಈ ಸೇತುವೆ ಮೇಲೆ ನಡೆಯಲು ಒಬ್ಬರಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಹಚ್ಚ ಹಸುರಿನ ಪ್ರಕೃತಿ ಸೌಂದರ್ಯದ ನಡುವೆ ಈ ಗಾಜಿನ ಸೇತುವೆ ಮೇಲೆ ನಡೆಯುವುದು ಹೊಸ ಅನುಭವ ನೀಡಲಿದೆ.

ಕೇರಳದ ವಯನಾಡಿನಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಿದ್ದ ತಂತ್ರಜ್ಞರೇ ಕೊಡಗಿನ ಗಾಜಿನ ಸೇತುವೆ ಶಿಲ್ಪಿಗಳಾಗಿದ್ದಾರೆ. ಏಕಕಾಲಕ್ಕೆ 50 ಜನ ಈ ಸೇತುವೆ ಮೇಲೆ ಸಂಚರಿಸಬಹುದಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ 15 ರಿಂದ 20 ಜನರನ್ನು ಮಾತ್ರ ಒಮ್ಮೆಗೆ ಸೇತುವೆ ಮೇಲೆ ಬಿಡಲಾಗುತ್ತಿದೆ. 200 ರೂ. ಶುಲ್ಕ ನೀಡಿ 20 ನಿಮಿಷಗಳ ಕಾಲ ಈ ಸೇತುವೆ ಮೇಲೆ ನಡೆದಾಡಿ ಜೀವಮಾನದ ಅನುಭವ ಪಡೆಯಬಹುದಾಗಿದೆ. ಉದ್ಯಮಿ ಪಪ್ಪಿ ವಸಂತ್ ಮತ್ತು ಪಾಲುದಾರರು ಕೊಡಗಿನ ಪ್ರವಾಸೋದ್ಯಮಕ್ಕೆ ನೀಡಿರುವ ವಿನೂತನ ಕೊಡುಗೆ ಇದಾಗಿದೆ.

ಕೇರಳದ ವಯನಾಡ್‌ನಲ್ಲಿ ಖಾಸಗಿಯಾಗಿ ನಿರ್ಮಾಣವಾಗಿದ್ದ ಗ್ಲಾಸ್ ಸ್ಲೂ ವಾಕ್ ಬ್ರಿಡ್ಜ್ ಬಿಟ್ಟರೆ ದಕ್ಷಿಣ ಭಾರತದಲ್ಲಿ ಇರುವ ಗ್ಲಾಸ್ ಬ್ರಿಡ್ಜ್ ಎನ್ನುವ ಖ್ಯಾತಿಗೆ ಕೊಡಗಿನ ಈ ಗ್ಲಾಸ್ ಬ್ರಿಡ್ಜ್ ಪಾತ್ರವಾಗಿದೆ. ಬಿಹಾರದ ರಾಜ್‌ಗಿರ್ ಮತ್ತು ಸಿಕ್ಕಿಂ ರಾಜ್ಯದ ಪೆಲ್ಲಿಂಗ್‌ನಲ್ಲಿ ಈ ರೀತಿಯ ಗಾಜಿನ ಸೇತುವೆಗಳಿವೆ. ದಕ್ಷಿಣ ಭಾರತದ ಎರಡನೆಯ ಮತ್ತು ಕರ್ನಾಟಕದ ಮೊಟ್ಟಮೊದಲ ಗಾಜಿನ ಸೇತುವೆ ಎಂಬ ಖ್ಯಾತಿಗೆ ಕೊಡಗಿನ ಪಪ್ಪಿಸ್ ಗಾಜಿನ ಸೇತುವೆ ಸೇರಿದೆ.

ತಿರುವನಂತಪುರಂನ ಅಕ್ಕುಳಂನಲ್ಲಿ ಎಂಬತ್ತು ಮೀಟರ್ ಗ್ಲಾಸ್ ಸ್ಕೈವಾಕ್ ಕಳೆದ ತಿಂಗಳಷ್ಟೇ ನಿರ್ಮಿಸಲಾಗಿದ್ದು, ಉದ್ಘಾಟನೆಯಾಗಬೇಕಿದೆ.
ಹೇಗೆ ಹೋಗಬೇಕು

ಮಡಿಕೇರಿಯಿಂದ ತಲಕಾವೇರಿಗೆ ಹೋಗುವ ಮಾರ್ಗದಲ್ಲಿ ಏಳು ಕಿ.ಮಿ ದೂರದಲ್ಲಿರುವ ಉಡೋತ್ ಮೊಟ್ಟೆಗೆ ಸ್ವಂತ ವಾಹನದಲ್ಲಿ ಹೋಗಬಹುದು. ತಲಕಾವೇರಿಗೆ ಹೋಗುವ ಬಸ್‌ನಲ್ಲೂ ತೆರಳಬಹುದು.






