ಕೊಡಗು
ಅಮಾಯಕ ಯುವಕನ ಮೇಲೆ ಸುಳ್ಳಾರೋಪ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು SKSSF ಕೊಡಗು ಜಿಲ್ಲಾ ಸಮಿತಿ ಒತ್ತಾಯ
ಮಡಿಕೇರಿ : ಕೊಡವ ಹೆಣ್ಣು ಮಕ್ಕಳನ್ನು ಹಾಗೂ ದೇವತೆಯನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಅಮಾಯಕ ಯುವಕನೊಬ್ಬನ ಮೇಲೆ ಸುಳ್ಳಾರೋಪ ನಡೆಸಿ ತೇಜೋವಧೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು SKSSF ಕೊಡಗು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಟಿಪ್ಪು ಸುಲ್ತಾನ್ ರವರನ್ನು ನಿರಂತರವಾಗಿ ನಿಂಧಿಸುವ ‘Kodavaholics’ ಎಂಬ ಇನ್ಸ್ಟಾಗ್ರಾಂ ಖಾತೆಯ ಪೋಸ್ಟ್ ಒಂದಕ್ಕೆ ನಕಲಿ ಖಾತೆ ಬಳಸಿ ಕೊಡವರ ದೇವತೆಯ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಸಂದೇಶ ಕಳುಹಿಸಿದ ಬೆನ್ನಲ್ಲೇ, ಸಿದ್ದಾಪುರದ ಅಮಾಯಕ ಯುವಕನೊಬ್ಬನ ಹೆಸರು ಮತ್ತು ಭಾವಚಿತ್ರವನ್ನು ಬಳಸಿ ಏಕಾಏಕಿ ಇದು ಈತ ನಡೆಸಿದ ಕೃತ್ಯ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿದರು.
ಅಲ್ಲದೇ ಯುವಕನಿಗೆ ಉಗ್ರಪಟ್ಟ ಕಟ್ಟಲೂ ಕೂಡ ಹಲವರು ಮುಂದಾದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಮೈಸೂರು -ಕೊಡಗು ಕ್ಷೇತ್ರದ ಸಂಸದರಾಗಿರುವ ಪ್ರತಾಪ್ ಸಿಂಹರವರು ಕೂಡ ಯಾವುದೇ ಆಧಾರಗಳಿಲ್ಲದೆ ಯುವಕನನ್ನು ಬೊಟ್ಟು ಮಾಡಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.
ಪೋಲಿಸ್ ವಿಚಾರಣೆಯ ಬಳಿಕ ಈ ಯುವಕನಿಗೂ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುವುದು ಬೆಳಕಿಗೆ ಬಂದರೂ ಸಹ ಯುವಕನ ಖಾತೆ ಹ್ಯಾಕ್ ಮಾಡಲಾಗಿದೆಯೆಂದು ಸುಳ್ಳು ಆರೋಪಗಳನ್ನು ನಡೆಸಿ ಮತ್ತೆ ಅಮಾಯಕ ಯುವಕನನ್ನು ಎತ್ತಿ ಕಟ್ಟುವ ಶ್ರಮ ನಡೆಯಿತು.
ಈ ಎಲ್ಲಾ ಬೆಳವಣಿಗಳು ನಡೆಯುತ್ತಿರುವಂತೆಯೇ ಕೊಡವ ಸಂಘಟನೆಗಳಿಂದ ಹಾಗೂ ಕೊಡಗಿನ ಇತರೆ ಸಂಘಟನೆಗಳಿಂದ ನೈಜ ಆರೋಪಿಯನ್ನು ಪತ್ತೆ ಹಚ್ಚಬೇಕು ಎಂಬ ಕೂಗು ಜೋರಾಯಿತು.
ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಶೀಘ್ರಗೊಳಿಸಿದ ಪೊಲೀಸರು ವಿರಾಜಪೇಟೆ ಸಮೀಪದ ಬಿಜೆಪಿ ಮುಖಂಡನ ಪುತ್ರನಾದ ನೆರವಂಡ ದಿವಿನ್ ದೇವಯ್ಯ ಎಂಬಾತನನ್ನು ಬಂಧಿಸುತ್ತಾರೆ.
ಘಟನೆಯ ನೈಜ ಆರೋಪಿಯನ್ನು ಬಂಧಿಸಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದ ಪೋಲಿಸ್ ಅಧಿಕಾರಿಗಳ ಕಾರ್ಯವನ್ನು SKSSF ಜಿಲ್ಲಾ ಸಮಿತಿಯು ಅಭಿನಂದಿಸುತ್ತದೆ.
ಆರೋಪಿಯ ಬಂಧನವಾಗುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಇತರ ಸಂಘಟನೆಗಳು ಕರೆ ನೀಡಿದ್ದ ಕೊಡಗು ಬಂದ್ ಹಿಂಪಡೆದರು. ಕಾರಣ ಆರೋಪಿ ನಿರೀಕ್ಷಿತ ಹೆಸರು ಬಂದಿರಲಿಲ್ಲ. ಇದೇ ಆರೋಪಿ ಒಬ್ಬ ಮುಸಲ್ಮಾನ ವ್ಯಕ್ತಿ ಆಗಿದ್ದರೆ ಇಲ್ಲಿನ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.
ಇದರ ಹಿಂದೆ ಅನ್ಯೋನ್ಯತೆಯಿಂದ ಬಾಳುತ್ತಿರುವ ಕೊಡವರು ಮತ್ತು ಮುಸ್ಲಿಮರ ನಡುವೆ ಸಂಘರ್ಷ ಸೃಷ್ಟಿಸಿ ಕೊಡಗಿನ ಶಾಂತಿಯುತ ವಾತಾವರಣವನ್ನು ಕೆಡಿಸಲು ವ್ಯವಸ್ಥಿತವಾದ ಷಡ್ಯಂತ್ರ ನಡೆದಿದೆ.
ಘಟನೆಯ ಆರೋಪಿ ದಿವಿನ್ ದೇವಯ್ಯ ಮಾತ್ರ ಆಗಿರಲು ಸಾಧ್ಯವಿಲ್ಲ. ಉನ್ನತ ಮಟ್ಟದ ತನಿಖೆ ನಡೆಸಿ ಆತನಿಗೆ ಕುಮ್ಮಕ್ಕು ನೀಡಿದ ಮತ್ತು ಆತನೊಂದಿಗೆ ಶಾಮೀಲಾಗಿರುವ ಕಿಡಿಗೇಡಿಗಳನ್ನು ಸಹ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಿದೆ ಎಂದು ಒತ್ತಾಯಿಸಿದರು.
ಅಮಾಯಕ ಯುವಕನ ಭಾವಚಿತ್ರ ಬಳಸಿ ಸುಳ್ಳು ಆರೋಪವನ್ನು ಮಾಡಿ ಉಗ್ರ ಪಟ್ಟ ಕಟ್ಟಿ ಯುವಕನಿಗೆ ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಯುವಕನ ತಂದೆ ದೂರು ದಾಖಲಿಸಿದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಕೂಡಲೇ ಆ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಮಾಜದಲ್ಲಿ ಒಡಕುಂಟುಮಾಡುವ ‘ಕೊಡವ ಹೊಳಿಕ್ಸ್ ‘ ಎಂಬ ಇನ್ಸ್ಟಾಗ್ರಾಂ ಖಾತೆಯ ಹಿಂದಿನ ಕಾಣದ ಕೈಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು SKSSF ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ತಮ್ಲೀಖ್ ದಾರಿಮಿ ಮಡಿಕೇರಿ, ಹಾಗೂ ಪ್ರಧಾನ ಕಾರ್ಯದರ್ಶಿಯಾದ ಜಂಶೀರ್ ವಾಫಿ ಗೋಣಿಕೊಪ್ಪ ಒತ್ತಾಯಿಸಿದ್ದಾರೆ.





