ಕರ್ನಾಟಕ
ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಮೂವರ ಬಂಧನ

ಬೆಂಗಳೂರು: ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಅಂಗವಾಗಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದು ಹಾಕಿದ್ದ ಆರೋಪದಡಿ ಪುನೀತ್ ಕೆರೆಹಳ್ಳಿ ಸೇರಿದಂತೆ ಮೂವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನೃಪತುಂಗ ರಸ್ತೆ ಹಾಗೂ ಹಡ್ಸನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಫ್ಲೆಕ್ಸ್ ಅಳವಡಿಸಲಾಗಿತ್ತು.
ಶನಿವಾರ ರಾತ್ರಿ ಸ್ಥಳಕ್ಕೆ ಹೋಗಿದ್ದ ಪುನೀತ್ ಕೆರೆಹಳ್ಳಿ ಹಾಗೂ ಇತರರು, ಫ್ಲೆಕ್ಟ್ ಹರಿದು ಹಾಕಿದ್ದಾರೆ.
ಇದರ ವಿರುದ್ಧ ರಾಜಾಜಿನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ್ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೋಮು ಸೌಹಾರ್ದತೆಗೆ ಧಕ್ಕೆ (ಐಪಿಸಿ 153ಎ) ಹಾಗೂ ಉದ್ದೇಶಪೂರ್ವಕವಾಗಿ ಕೋಮು ಗಲಭೆಗೆ ಪ್ರಚೋದನೆ (ಐಪಿಸಿ 295 ಎ) ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪುನೀತ್ ಕೆರೆಹಳ್ಳಿ ಸೇರಿ ಮೂವರನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿವೆ.
‘ಫ್ಲೆಕ್ಸ್ ಹರಿದು ಹಾಕುತ್ತಿರುವ ದೃಶ್ಯವನ್ನು ಆರೋಪಿಗಳೇ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಅದೇ ವಿಡಿಯೊವನ್ನು ಪುರಾವೆಯಾಗಿ ಪರಿಶೀಲಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.





