Special
ಆಮಿರ್ ಅಶ್ಅರೀ ಬನ್ನೂರು ಬರಹ|| ಸ್ವಾತಂತ್ರ್ಯೋತ್ಸವದ ದಿನ ಮಹಿಳೆಯರ ರಕ್ಷಣೆಗೆ ಮುನ್ನುಡಿ ಬರೆಯಲಿ
ಆಮಿರ್ ಅಶ್ಅರೀ ಬನ್ನೂರು
(ಸಂಚಾಲಕರು, ಖಿದ್ಮಾ ಫೌಂಡೇಶನ್ ಕರ್ನಾಟಕ)
ಸಮಾನತೆ, ಘನತೆ ಮತ್ತು ತಾರತಮ್ಯದಿಂದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹಕ್ಕುಗಳನ್ನು ಮಹಿಳೆಯರಿಗೆ ದೇಶದ ಸಂವಿಧಾನವು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಹೆಚ್ಚುವರಿಯಾಗಿ, ಭಾರತವು ಮಹಿಳೆಯರ ಹಕ್ಕುಗಳನ್ನು ನಿಯಂತ್ರಿಸುವ ವಿವಿಧ ಕಾನೂನುಗಳನ್ನು ಕೂಡ ಹೊಂದಿದೆ.
ಅಗತ್ಯ ಬಂದಾಗ ಮಹಿಳೆಯ ಪರವಾಗಿ ಆ ಕಾಯಿದೆಗಳು ಸಹಕಾರಿಯಾಗಬೇಕು. ಮಹಿಳೆಯರ ಮೇಲಿನ ಶೋಷಣೆಯು ವರ್ತಮಾನ ಭಾರತದ ಅತಿ ದೊಡ್ಡ ತಲ್ಲಣವಾಗಿದೆ. ಮಹಿಳೆಯರ ಮೇಲಿನ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರಗಳನ್ನು ಹೂಡುತ್ತಿರುವುದು ವಿಪರ್ಯಾಸ. ದೇಶದಲ್ಲಿ ಅದೆಷ್ಟೋ ಮಹಿಳೆಯರ ಮೇಲೆ ಉಂಟಾದ ಅತ್ಯಾಚಾರದಂತಹ ಅಘಾತಕಾರಿ ಪ್ರಕರಣಗಳು ಸಂಭವಿಸಿದಾಗ ಅದರ ಮೇಲೆ ನಿರ್ಲಕ್ಷ್ಯ ಧೋರಣೆಯನ್ನು ತೋರಿರುವುದೇ ಇದಕ್ಕೆ ಅತಿ ದೊಡ್ಡ ಪುರಾವೆ. ಮಹಿಳೆಯರ ಮೇಲೆ ಎಲ್ಲೆ ಮೀರಿ ನಡೆಯುತ್ತಿರುವ ಅನ್ಯಾಯವು ಮಲತಾಯಿ ಧೋರಣೆಯಾಗಿದೆ ಎಂದು ಆಡಳಿತ ವರ್ಗ ಅರಿತುಕೊಳ್ಳಬೇಕು. ಮಹಿಳೆಯರ ಮಾನ ಸಾರ್ವಜನಿಕವಾಗಿ ಹರಣವಾದರೂ ದೇಶದ ಘನವೆತ್ತ ಪ್ರತಿನಿಧಿಗಳೇ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ಚಿಂತನೆಗಳನ್ನು ನಡೆಸದೆ ಇರುವುದು, ಕನಿಷ್ಠಪಕ್ಷ ಅಂಥವರನ್ನ ಭೇಟಿಯಾಗಿ ಸಾಂತ್ವನಗಳನ್ನು ಹೇಳದಿರುವುದು ಭಾರತದಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆ ತೋರಿಸಿಕೊಡುತ್ತದೆ. ಪರಕೀಯರ ವಿರುದ್ಧವೇ ಪರಿಣಾಮಕಾರಿಯಾಗಿ ಹೋರಾಟಗಳನ್ನು ಮಾಡಿ ಅವರ ಬೆನ್ನು ಮುರಿದ ಚರಿತ್ರೆಗಳನ್ನು ಹೇಳಲಿಕ್ಕಿರುವ ಭಾರತೀಯ ಮಹಿಳೆಯರಿಗೆ ಈ ವರ್ಷದ ಸ್ವಾತಂತ್ರ್ಯೋತ್ಸವ ‘ರಕ್ಷಣೆಯ ಆಶ್ವಾಸನೆ’ಯನ್ನು ನೀಡಲಿ.
ಹೆಣ್ಣು ತನ್ನ ಶರೀರವನ್ನು ಸಂಪೂರ್ಣವಾಗಿ ಮುಚ್ಚುವ ಸ್ವಾತಂತ್ರ್ಯವನ್ನು ಹೊಂದಿರದೆ, ನಿತ್ಯವೂ ಶೋಷಣೆಗಳಿಗೆ ಒಳಪಡುತ್ತಿದ್ದಳು. ಚಿಂತಾಜನಕ ಸ್ಥಿತಿಯಲ್ಲಿದ್ದ ಹೆಣ್ಣಿನ ಕರಾಳ ಯಾತನೆ ವಿವರಿಸುವ ಇತಿಹಾಸವು ಮತ್ತು ಪ್ರಸ್ತುತ ಭಾರತದಲ್ಲಿ ಹೆಣ್ಣಿಗೆ ನೀಡುವ ಅವಕಾಶ ಮತ್ತು ಸ್ವಾತ್ಯಂತ್ರವನ್ನು ಮುಂದಿಟ್ಟರೇ ಆಧುನಿಕ ವಿದ್ಯಾಮಾನಗಳು ಹೆಣ್ಣಿನ ಪಾಲಿಗೆ ಬಹುದೊಡ್ಡ ನಿರಾಳತೆಯನ್ನು ತಂದಿಡುತ್ತದೆ. ಭಾರತ ಸಂವಿಧಾನ ಮಹಿಳೆಯರಿಗೆ ಆರೋಗ್ಯಕರವಾಗಿರುವಾಗ ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಷ್ಟ್ರಪತಿಯವರೆಗೂ ದೇಶದಲ್ಲಿ ಹೆಣ್ಣು ತನ್ನ ಅವಕಾಶವನ್ನು ಬಳಸಿಕೊಂಡು, ಅದನ್ನು ಸಂಕೀರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾಳೆ.
ಎರಡು ಕಾರಣಗಳಿಗೆ ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ ಭಾರತ ಮಹಿಳಾ ಕ್ರೀಡಾಪಟುಗಳನ್ನು ಮುನ್ನೆಲೆಗೆ ತಂದಿದೆ. ಹರಿಯಾಣ ಮೂಲದ ಮನು ಭಾಕರ್ ಈ ವರ್ಷ ಭಾರತಕ್ಕೆ ಮೊದಲ ಪದಕವನ್ನು ತಂದು ಕೊಟ್ಟು ದೇಶದ ಜನರಿಂದ ಸೈ ಎನಿಸಿಕೊಂಡರು.
10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ ಮನು ಬಾಕರ್ ಈ ಸಾಧನೆಯ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಶೂಟಿಂಗ್ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮತ್ತೊಂದೆಡೆ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ವಿನೇಶ್ ಪೋಗಟ್ ಅನರ್ಹಗೊಂಡಾಗ ಭಾರತೀಯರ ಕಣ್ಣು ತೇವಗೊಂಡಿತು. ಅವಳ ಅನರ್ಹತೆ ಭಾರತೀಯರ ಪಾಲಿಗೆ ಜೀರ್ಣಿಸಿಕೊಳ್ಳಲಾಗದ ತುತ್ತಂತ್ತಾಗಿತು. 100 ಗ್ರಾಂ ಹೆಚ್ಚುವರಿ ತೂಕದಿಂದ ಹೊರಬಿದ್ದ ಬೆನ್ನಲ್ಲೇ ಪಂದ್ಯಕ್ಕೆ ಅವಕಾಶ ಸಿಗದಿದ್ದರೂ, ಅಖಂಡ ಭಾರತೀಯರ ಹೃದಯದಲ್ಲಿ ಮೂಡಿಸಿದ ಕನಿಕರ ಕುಸ್ತಿಪಟುವಿನ ನೋವಿನ ಬೇನೆ ನಿವಾರಿಸಿತು. ಬೆಳ್ಳಿಯ ಪದಕ ಅವಳ ಕೈ ಸೇರಲಿ ಎಂದು ಭಾರತೀಯರು ಪ್ರಾರ್ಥಿಸುತ್ತಿದ್ದಾರೆ.
ಹೆಣ್ಣು ಮಕ್ಕಳ ಅಭಿವೃದ್ಧಿಯ ಮತ್ತು ಸಬಲೀಕರಣದ ಚಿಂತನೆಯನ್ನು ಮಾಡುತ್ತಿದೆ. ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳು ಮಹಿಳೆಯರ ಶ್ರೇಯಸಿಗಾಗಿ ಮತ್ತು ಅಭಿವೃದ್ಧಿಗಾಗಿ ರೂಪಿಸಿರುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಹೆಣ್ಣು ಭಾಗಿಯಾಗಬೇಕೆಂಬ ತೀರ್ಮಾನವನ್ನು ಈ ಸ್ವಾತಂತ್ರ್ಯದ ದಿನದಂದು ಕೈಗೊಳ್ಳಬೇಕು. ಅವಕಾಶಗಳು ಸಿಗುತ್ತದೆ ಎಂಬ ಕಾರಣಕ್ಕೆ ಸಂಸ್ಕಾರಸ್ತ ಬದುಕಿನ ರೇಖೆಯನ್ನು ದಾಟಿ, ಅಸಂಸ್ಕಾರಿತರಾಗಿ ಬದುಕುವುದು ಭಾರತದ ಸಂಸ್ಕೃತಿಗೆ ಸಮಂಜಸವಾದದ್ದಲ್ಲ. ದೊಡ್ಡ ಪ್ರಮಾಣದ ಸೈನ್ಯ ಸಾಮ್ರಾಜ್ಯಗಳನ್ನು ಕಟ್ಟಿ, ದೇಶಕ್ಕಾಗಿ ಹೋರಾಟ ಮಾಡಿದ ಮಹಿಳಾ ಮಣಿಗಳು ಆದರ್ಶವಾಗಿ, ಅವರ ಹಾದಿಯಲ್ಲಿರುವ ಬದುಕಾಗಿರಲಿ.





