Special
ವೈಚಾರಿಕತೆಯ ಮಹಾ ಘೋಷಣೆಯೇ ‘ಬಕ್ರೀದ್’!
ಆಚರಣೆಯ ಮೂಲಕ ಸಂಭ್ರಮ, ಆರಾಧನೆಯ ಮೂಲಕ ಸಂತೃಪ್ತಿ, ಶ್ರೇಷ್ಠ ವೈಚಾರಿಕ ತತ್ವಗಳ ಮೂಲಕ ಬದುಕಿಗೆ ಅರ್ಥಪೂರ್ಣತೆಯ ಕಿರೀಟ ತೊಡಿಸುವ ಹಬ್ಬವೇ ಬಕ್ರೀದ್ ಅಥವಾ ಈದ್ ಉಲ್ ಅಝ್ ಹಾ.
ಬಕ್ರೀದಿನ ಆಚರಣೆಯು ಶಾಂತಿ ಸೌಹಾರ್ದತೆ, ಸಹೃದಯತೆ ಹಾಗೂ ಸಹೋದರ ಭಾವ ಉಕ್ಕಿಸುವ ಸಮತೆಯ ಪ್ರತೀಕವಾದರೆ, ಬಕ್ರೀದಿನ ವಿಶಿಷ್ಟ ಸಾಮೂಹಿಕ ಪ್ರಾರ್ಥನೆಯು ವಿನೀತ ಭಾವದಲಿ ಸೃಷ್ಟಿಕರ್ತನ ಮುಂದೆ ನಿಂತು, ಅವನ ಮಹಾ ಕಾರುಣ್ಯಕ್ಕೆ ಸಲ್ಲಿಸುವ ಕೃತಜ್ಞತೆ, ತಾನು ಕೃತಘ್ನನಲ್ಲವೆಂಬ ಸಂತೃಪ್ತಿಯ ಭಾವ ಪಡೆಯುವ ಪ್ರಯತ್ನ. ಸರಳತೆ, ತ್ಯಾಗ, ತಾಳ್ಮೆಗಳೆಂಬ ಅರ್ಥಪೂರ್ಣ ಬದುಕಿನ ಅನಿವಾರ್ಯ ಗುಣಗಳ ಮೂಲಕ ಸಮ ಸಮಾಜದ ಕನಸನ್ನು ಬೆಸೆಯುವ ವೈಚಾರಿಕತೆಯ ಮಹಾ ಘೋಷಣೆಯ ಸ್ಮರಣೆಯೇ ಬಕ್ರೀದ್. ವ್ಯಕ್ತಿ, ಸಮೂಹ, ಸಾಮಾಜಿಕತೆಯನ್ನು ಪರಸ್ಪರ ಬಿರುಕಿಲ್ಲದಂತೆ ಸಾವಯವಗೊಳಿಸುವ ಆಚರಣೆ, ಆ ಆಚರಣೆಯೊಳಗೆ ಹುದುಗಿರುವ ವೈಚಾರಿಕ ನಡಾವಳಿಗಳ ಮೂಲಕ ಕಪ್ಪು ಬಿಳುಪು ಕಂದು ಎಂಬ ಬೇಧಭಾವವಿಲ್ಲದೆ, ಮೇಲು ಕೀಳು ಎಂಬ ಅಂತರವಿಲ್ಲದೆ, ಬಡವ ಶ್ರೀಮಂತ ಎಂಬ ವರ್ಗ ತಾರತಮ್ಯವಿಲ್ಲದೆ ಮಾನವ ಸಮುದಾಯಕೆ ಏಕತೆಯ ಸಂದೇಶವನ್ನು ಏಕಕಂಠದಲಿ ಸಾರುವ ಹಬ್ಬ.
ಈ ಹಬ್ಬದ ಹಿನ್ನೆಲೆಯಲ್ಲಿ ಮಾನವ ರಾಶಿಯನ್ನು ಸಮಾನತೆಯ ಮೈದಾನದಲ್ಲಿ ಸಮಾವೇಶಗೊಳಿಸುವ ಪವಿತ್ರ ಹಜ್ ಇದೆ. ಪ್ರವಾದಿ ಇಬ್ರಾಹೀಂ(ಅ)ರವರ ಪರಮ ಪಾವನ ಬದುಕಿನ ಸುತ್ತ ಹೆಣೆದುಕೊಂಡಿರುವ ಘಟನಾವಳಿಗಳ ಒಟ್ಟು ಮೊತ್ತವೇ ಹಜ್ ಕರ್ಮ. ಆ ಕರ್ಮದ ಮರ್ಮವನ್ನು ಅರಿತವರಿಗೆ ಅದರ ಆತ್ಯಂತಿಕ ದೈವಿಕ ಸಂದೇಶದ ಸೌಂದರ್ಯ ಗೋಚರವಾಗುತ್ತದೆ. ಹಾಜರ ಬೀವಿ(ರ) ಎಂಬ ಮಹಾತಾಯಿಯೊಬ್ಬರ ತ್ಯಾಗದ ಫಲದ, ಕರುಣೆಯ ಜಲದ, ಭಕ್ತಿಯ ನಿಲುವಿನ ನೆನಕೆ ಇಲ್ಲದೆ ಹಜ್ ಹಬ್ಬ ಅಥವಾ ಬಕ್ರೀದ್ ಪೂರ್ಣಗೊಳ್ಳದು. ಸ್ತ್ರೀತ್ವದ ಆತ್ಯಂತಿಕ ಶಕ್ತಿಯ ಪ್ರತೀಕವಾಗಿರುವ ಹಾಜರಾ ಬೀವಿ(ರ) ನಿರ್ಜನ ಮಕ್ಕಾ ಮರುಭೂಮಿಯಲ್ಲಿ ಹಸುಗೂಸಿನೊಂದಿಗೆ, ಗಂಡಾಸರೆಯಿಲ್ಲದೆ, ದೃಢ ವಿಶ್ವಾಸದ ಬಲದಲಿ, ಅಪ್ರತಿಮ ಹೋರಾಟ ಪ್ರಜ್ಞೆಯಲಿ ಹಸುಗೂಸಿನ ನೀರಡಿಕೆ ನೀಗಿಸಲು ಹನಿ ನೀರಿಗಾಗಿ ಓಡಾಡಿದ ಸ್ಮರಣೆಯು ಮನುಷ್ಯ ಮನಸ್ಸಿಗೆ ತುಂಬುವ ಚೈತನ್ಯ ಅದಮ್ಯವಾದುದು.
‘ನಾನು’ ಎಂಬ ಸ್ವಾರ್ಥ ಭಾವ, ವಸ್ತ್ರ ವೈಢೂರ್ಯಗಳ ಅಹಂಭಾವ, ವರ್ಗ, ವರ್ಣ ಬೇಧಗಳ ಅಸ್ಪೃಶ್ಯತೆಗಳೆಂಬ ಪೈಶಾಚಿಕ ಭಾವಗಳ ಕವಚವನ್ನು ಕಳಚಿ, ಪರಿಶುದ್ಧತೆಯ ಕಡೆಗೆ ತುಡಿಯುವ ಮನುಷ್ಯನಿಗೆ ಸೃಷ್ಟಿಕರ್ತ ಒದಗಿಸಿದ ಸುವರ್ಣಾವಕಾಶವೇ ಹಜ್ ಎಂಬ ಪವಿತ್ರ ಕರ್ಮ. ಆ ಅವಕಾಶವನ್ನು ಅರಿತು, ಆಚರಣೆಯ ಮೂಲಕ ಸಾಮಾಜಿಕ ಸಮತೆಯ ಪ್ರಜ್ಞೆಯನ್ನು ದೈವಿಕ ಭಕ್ತಿಯ ಹೊಳಪಿನಿಂದ ಹೃದ್ಗತಗೊಳಿಸಿಕೊಳ್ಳುವ ವ್ಯಕ್ತಿ ಬಕ್ರೀದಿನ ನರ ಬಲಿ ನಿಷಿದ್ಧದ, ಮನುಷ್ಯ ಘನತೆಯನ್ನು ಎತ್ತಿ ಹಿಡಿಯುವ, ತ್ಯಾಗ, ಸಹನೆಯ ಹಬ್ಬವನ್ನು ಅದರ ಸಂದೇಶವನ್ನು ಒಳಗೊಂಡು ಆಚರಿಸಿ ಅರ್ಥಪೂರ್ಣಗೊಳಿಸುತ್ತಾನೆ.
ಒಬ್ಬ ಸೃಷ್ಟಿಕರ್ತನನ್ನು ಬಿಟ್ಟು ಇನ್ಯಾರ ಮುಂದೆಯೂ ತಲೆಯ ಭಾಗದೆ, ಪ್ರಾಮಾಣಿಕತೆಯ, ದೃಢ ವಿಶ್ವಾಸದ ಅಗ್ನಿದಿವ್ಯದಲಿ ಬೆಂದು ಅರಳಿ, ಸತ್ಯಕ್ಕೆ ಎಳ್ಳಷ್ಟು ಅಪಚಾರವಾಗದಂತೆ ಪ್ರತಿಯೊಂದನು ಪ್ರಶ್ನಿಸುತ್ತಾ, ಪರಮ ಸತ್ಯದ ಹುಡುಕಾಟದಲ್ಲೇ ಆತ್ಯಂತಿಕ ಸತ್ಯವನು ಕಂಡುಕೊಂಡು ಬದುಕಿ ಬಾಳಿದ ‘ಅಲ್ಲಾಹನ ಮಿತ್ರ’ ಎಂಬ ಶ್ರೇಷ್ಠತೆಯ ಪಾರಮ್ಯ ತಲುಪಿ ಮಾನವ ಘನತೆಯ ಪತಾಕೆಯನು ಎತ್ತಿ ಹಿಡಿದ ಹಝ್ರತ್ ಇಬ್ರಾಹೀಂ ಅಲೈಹಿಸ್ಸಲಾಮ್ ರಿಗೆ ತಮ್ಮ ಸುದೀರ್ಘ ಜೀವನ ಯಾತ್ರೆಯ ಇಳಿ ವಯಸ್ಸಿನಲ್ಲಿ ತನ್ನ ಸತ್ಯನಿಷ್ಠೆಯ ಪರಂಪರೆಯನ್ನು ಮುಂದುವರಿಸುವ ವಾರೀಸುದಾರನಿಲ್ಲವೆಂಬ ಸತ್ಯದ ಅರಿವಾಗಿ, ಒಳಗೊಳಗೇ ದುಃಖವು ಮಡುಗಟ್ಟಿ ‘ನನಗೊಂದು ಪುತ್ರನನ್ನು ಕರುಣಿಸು ನಾಥಾ, ನೀನು ಹೇಳಿದರೆ ಅವನನ್ನು ಬಲಿಕೊಡಲೂ ಸಿದ್ಧ’ ಎಂದು ಭಾವುಕತೆಯಲಿ ಮನದುಂಬಿ ಪ್ರಾರ್ಥಿಸಿದರು. ಆಗ ಹುಟ್ಟಿದವರೇ ಹಝ್ರತ್ ಇಸ್ಮಾಈಲ್ ಅಲೈಹಿಸ್ಸಲಾಮ್. ಆ ಮಗು ಬೆಳೆದಂತೆ ಹಝ್ರತ್ ಇಬ್ರಾಹೀಂ ಅಲೈಹಿಸ್ಸಲಾಮರ ಕನಸಿನಲ್ಲಿ ಸೃಷ್ಟಿಕರ್ತನ ಅಶರೀರವಾಣಿಯೊಂದು ಮೊಳಗಿತು. “ಮರೆತೆಯಾ ನಿನ್ನ ವಾಗ್ದಾನ? ಮರೆತೆಯಾ ಪುತ್ರನನ್ನು ಬಲಿ ಕೊಡುವ ನಿನ್ನ ಮಾತು?” ಎಂಬರ್ಥದ ಸೃಷ್ಟಿಕರ್ತನ ದೂತನ ಮಾತಿಗೆ ಚಕಿತರಾಗಿ ಪುತ್ರ ವಾತ್ಸಲ್ಯದ ಕನಸಿನಂಥ ನವಿರು ಸುಖ ಭಾವದಿಂದ ವಾಸ್ತವಕೆ ಜಿಗಿದು ಬಂದ ಹಝ್ರತ್ ಇಬ್ರಾಹೀಮ್ ಅಲೈಹಿಸ್ಸಲಾಮ್ ವಚನ ಭ್ರಷ್ಟರಾಗದೆ ಪುತ್ರನನ್ನು ಬಲಿ ಕೊಡಲು ಮುಂದಾಗುತ್ತಾರೆ. “ತಂದೆಯವರೇ, ನೀವು ಧೈರ್ಯದಿಂದ ನನ್ನನ್ನು ಬಲಿಕೊಡಿ, ನಾನು ಅದಕ್ಕೆ ಸಿದ್ಧ’ ಎಂದು ತ್ಯಾಗದ ಅಮರ ಪಾಠಕೆ ನಾಂದಿ ಹಾಡುವ ಪುತ್ರ ಇಸ್ಮಾಈಲ್ ಅಲೈಹಿಸ್ಸಲಾಮ್ ತಮ್ಮನ್ನು ಬಲಿ ಕಲ್ಲಿಗೆ ಅರ್ಪಿಸಿಕೊಳ್ಳುತ್ತಾರೆ. ಇನ್ನೇನು ಪುತ್ರನ ರುಂಡ ತುಂಡರಿಸಬೇಕೆನ್ನುವಷ್ಟರಲ್ಲಿ ‘ನೀವು ನನ್ನ ಪರೀಕ್ಷೆಯಲಿ ಗೆದ್ದಿರಿ. ನರಬಲಿ ಕೂಡದು. ಅದು ನಿಷಿದ್ಧ” ಎಂಬರ್ಥದ ಮಾತುಗಳನ್ನಾಡಿ ಸಹನೆಯ ಪರೀಕ್ಷೆಯಲಿ ಗೆದ್ದವರನ್ನು ಸಂತೈಸುವ ಸೃಷ್ಟಿಕರ್ತನು ನರಬಲಿ ನಿಷೇಧದ ಘೋಷಣೆ ಮೊಳಗಿಸುವನು. ಹಝ್ರತ್ ಇಬ್ರಾಹೀಂ ಅಲೈಹಿಸ್ಸಲಾಮ್ ಮೇಕೆಯೊಂದನ್ನು ಬಲಿಕೊಟ್ಟು, ಅತ್ಯುತ್ತಮ ಭೋಜನ ಸವಿದು ಸೃಷ್ಟಿಕರ್ತನು ಘಟನಾತ್ಮಕವಾಗಿ ಸಾರಿದ ಮಾನವ ಘನತೆಯ ಸಂದೇಶವನ್ನು ಸಂಭ್ರಮಿಸುವರು.
ಬಕ್ರೀದಿನ ಸಂಭ್ರಮದ ಹಿನ್ನೆಲೆಯಲ್ಲಿ ಈ ಚರಿತ್ರೆಯನ್ನು ನೋಡಿದರೆ ಇಲ್ಲಿ ಮನುಷ್ಯ ಘನತೆಯನ್ನು ಎತ್ತಿ ಹಿಡಿಯುವ ಸೃಷ್ಟಿಕರ್ತನು ಆ ಘನತೆಯು ಲೋಕಾಂತ್ಯದವರೆಗೆ ನೆಲೆಗೊಳ್ಳಲು ಬೇಕಾದ ಆದೇಶವನ್ನು ಮೊಳಗಿಸುವನು. ಅದರಂತೆ ಇಸ್ಮಾಈಲ್ ಅಲೈಹಿಸ್ಸಲಾಮ್ ರ ಪರಂಪರೆಯಲ್ಲಿ ಸರ್ವ ಪ್ರವಾದಿಗಳ ನೇತಾರ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರನ್ನು ಲೋಕ ಕಲ್ಯಾಣದ ಕರ್ತವ್ಯದೊಂದಿಗೆ ನಿಯೋಜಿಸುತ್ತಾನೆ. ಅವರ ಮೂಲಕ ಇಸ್ಲಾಮ್ ಎಂಬ ಶಾಂತಿಯ ವೈಚಾರಿಕ ಆದರ್ಶವನ್ನು ಜಾಗತಿಕಗೊಳಿಸುತ್ತಾನೆ.
ಬಕ್ರೀದ್ ನಾಡಿನೆಲ್ಲೆಡೆ ಸಂಭ್ರಮ, ಸಡಗರದ ವಾತಾವರಣದ ಜೊತೆಗೆ ವೈಯಕ್ತಿಕ ಉನ್ನತಿ ಹಾಗೂ ಸಾಮಾಜಿಕ, ಸಾಮುದಾಯಿಕ ಅಭಿವೃದ್ಧಿಯ ಹಾಗೂ ವಿವಿಧ ಜಾತಿ, ಧರ್ಮಗಳ ನಡುವಿನ ಸೌಹಾರ್ದತೆಯ ಆಲೋಚನೆಗಳನ್ನು ವಿಸ್ತರಿಸಲಿ ಎಂಬ ಹಾರೈಕೆಯೊಂದಿಗೆ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು.

ಸ್ವಾಲಿಹ್ ತೋಡಾರ್





