Jobs
1,000 ನೌಕರರ ವಜಾಕ್ಕೆ ಮುಂದಾದ ‘ಅಮೆಜಾನ್ ಇಂಡಿಯಾ’
ನವದೆಹಲಿ: ಇ-ಕಾಮರ್ಸ್ ಕಂಪನಿ ಅಮೆಜಾನ್ ಭಾರತದ 1000 ನೌಕರರು ಸೇರಿದಂತೆ ಪ್ರಪಂಚದಾದ್ಯಂತ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದೆ.
ಹೊಸಬರು, ಹಳಬರು, ಅನುಭವಸ್ಥರು ಎಂದು ಲೆಕ್ಕವಿಡದೆ ಭಾರತದಲ್ಲಿ ಒಂದು ಸಾವಿರ ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಇದರಿಂದ ಬೆಂಗಳೂರು, ಗುರುಗ್ರಾಮ ಸೇರಿದಂತೆ ಭಾರತದ ಇತರ ಸ್ಥಳಗಳ ಅಮೆಜಾನ್ ಇಂಡಿಯಾ ಕಚೇರಿಗಳಲ್ಲಿನ ಉದ್ಯೋಗಿಗಳಲ್ಲಿ ಆತಂಕ ಮನೆ ಮಾಡಿದೆ.
ಕಂಪನಿಯು ಆರಂಭಿಕ ಹಂತದಲ್ಲಿರುವ ವ್ಯವಹಾರಗಳನ್ನು ಸಹ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಸಾಮೂಹಿಕ ವಜಾ ಮತ್ತು ಸ್ವಯಂಪ್ರೇರಿತ ಪ್ರತ್ಯೇಕತೆ ನೀತಿಗೆ ಸಂಬಂಧಿಸಿದಂತೆ ಪುಣೆಯ ಕಾರ್ಮಿಕ ಆಯೋಗ ಸಂಸ್ಥೆ ಕಳೆದ ಕೆಲ ತಿಂಗಳ ಹಿಂದೆ ಅಮೆಜಾನ್‌ಗೆ ಸಮನ್ಸ್ ಜಾರಿಗೊಳಿಸಿತ್ತು.
ವಜಾಗೊಳಿಸುವ ಘೋಷಣೆ ಹೊರಬೀಳುತ್ತಲೇ ಸಿಬ್ಬಂದಿ ಅಳುತ್ತಿರುವ, ಕಚೇರಿಗಳಲ್ಲಿ ದುಃಖದ ವಾತಾವರಣ ಆವರಿಸುವ ದೃಶ್ಯಗಳನ್ನು ‘ಅಮೆಜಾನ್ ಇಂಡಿಯಾ’ ಉದ್ಯೋಗಿಯೊಬ್ಬರು ಬೇಸರದಿಂದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ.
“ನನ್ನ ತಂಡದಲ್ಲಿ ಶೇ 75 ರಷ್ಟು ಮಂದಿ ಈಗಾಗಲೇ ವಜಾಗೊಂಡಿದ್ದಾರೆ. ಇನ್ನೂ ಉಳಿದಿರುವುದು ಶೇ 25 ರಷ್ಟು ಮಂದಿಯಲ್ಲಿ ನಾನು ಒಬ್ಬ. ಅದರೆ, ನನಗೆ ಕೆಲಸ ಮಾಡಲು ಆಸಕ್ತಿಯೇ ಇಲ್ಲ. ಅವರು ಕ್ಯಾಬಿನ್‌ನಲ್ಲಿ ನೌಕರರನ್ನು ವಜಾ ಮಾಡುತ್ತಿದ್ದರೆ, ಇನ್ನಿತರರು ಕಚೇರಿಯಲ್ಲಿ ದುಃಖಿತರಾಗಿದ್ದಾರೆ. ನಾನು ಶನಿವಾರ ಕಚೇರಿಗೆ ತೆರಳಿದ್ದೆ. ಅಲ್ಲಿ ಪರಿಸ್ಥಿತಿ ಸ್ವಲ್ಪವೂ ಸರಿಯಿರಲಿಲ್ಲ. ಬೇಸತ್ತು ನೇರವಾಗಿ ಮದ್ಯದಂಗಡಿಯಲ್ಲಿ ನಾಲ್ಕು ಬಾಟಲ್ ಮದ್ಯ ಖರೀದಿಸಿ ಮನೆ ಕಡೆ ಹೊರಟೆ. ಇಂದು ನನ್ನ ಅರೋಗ್ಯದಲ್ಲಿ ಏರುಪೇರುಂಟಾಗಿರುವ ಕಾರಣ ರಜೆ ತೆಗೆದುಕೊಂಡಿದ್ದೇನೆ” ಎಂದು ಉದ್ಯೋಗಿಯೊಬ್ಬರು ಪೋಸ್ಟ್ ಮಾಡಿರುವುದು ವೈರಲ್ ಆಗಿದೆ.
ಇ ಕಾಮರ್ಸ್ ಅಮೆಜಾನ್ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವೆಲಪರ್ ಅಗಿ ಕೆಲಸ ಮಾಡುತ್ತಿರುವ ಹರ್ಷ ಎಂಬುವವರು ಹೊಸ ಉದ್ಯೋಗವನ್ನು ಹುಡುಕುತ್ತಿರುವಾಗ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಉದ್ಯೋಗ ಕಡಿತದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹರ್ಷ ಅವರು ಸುಮಾರು ಆರು ತಿಂಗಳ ಹಿಂದೆ ಸಂಸ್ಥೆಯನ್ನು ಸೇರಿಕೊಂಡರು ಮತ್ತು ಕೆಲವು ದಿನಗಳ ಹಿಂದೆ ಅವರನ್ನು ವಜಾಗೊಳಿಸುವ ನೋಟಿಸ್ ಸ್ವೀಕರಿಸಿದರು.
ಇ – ಕಾಮರ್ಸ್ ದೈತ್ಯ ಅಮೆಜಾನ್ 18 ಸಾವಿರಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲು ಮುಂದಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಅಮೆಜಾನ್ ಸಿಇಒ ಆ್ಯಂಡಿ ಜಸ್ಸಿ, ಜನವರಿ 18ರಿಂದ ವಜಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದಿದ್ದಾರೆ.
ಜಗತ್ತಿನ ಎಲ್ಲಾ ದೇಶಗಳನ್ನು ಬಾಧಿಸುತ್ತಿರುವ ಆರ್ಥಿಕ ಅನಿಶ್ಚಿತತೆ ಇದಕ್ಕೆ ಕಾರಣವಾಗಿದ್ದು, ಸಂಸ್ಥೆಯನ್ನು ಲಾಭದಾಯಕವಾಗಿ ಮುನ್ನಡೆಸಲು ಈ ಕ್ರಮ ಅಗತ್ಯ ಎಂದು ಹೇಳಿದ್ದಾರೆ. ಇದಕ್ಕೂ ಮೊದಲೆ ಅಮೆಜಾನ್ ನವೆಂಬರ್‌ನಲ್ಲಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಅನಿಶ್ಚಿತ ಆರ್ಥಿಕತೆ ಹಾಗೂ ಸಾಂಕ್ರಾಮಿಕ ರೋಗ ಕೋವಿಡ್ ಸಮಯದಲ್ಲಿ ಸಾಕಷ್ಟು ಉದ್ಯೋಗಿಗಳನ್ನು ವೇಗವಾಗಿ ನೇಮಕ ಮಾಡಿಕೊಂಡಿದೆ. ಹೀಗಾಗಿ, ಉದ್ಯೋಗ ಕಡಿತ ಮಾಡಲು ನಿರ್ಧರಿಸಿದ್ದು, 18,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವುದಾಗಿ ಅಮೆಜಾನ್ ಸಿಇಒ ಆ್ಯಂಡಿ ಜಸ್ಸಿ ಹೇಳಿದ್ದಾರೆ.
ಉದ್ಯೋಗದ ವಜಾವನ್ನು ಸಹಿಸಿಕೊಳ್ಳುವುದು ಸಾವಿರಾರು ಜನರಿಗೆ ಕಷ್ಟಕರವೆಂದು ಸಂಸ್ಥೆ ತಿಳಿದಿದೆ. ಆದರೆ, ಈ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ. ಈ ಉದ್ಯೋಗ ವಜಾದಿಂದ ಸಂಕಷ್ಟಕ್ಕೊಳಗಾಗುವರ ಬೆಂಬಲಕ್ಕೆ ಸಂಸ್ಥೆ ಸದಾ ಇರುತ್ತದೆ. ವಜಾಗೊಳ್ಳುವ ನೌಕರರಿಗೆ ಪ್ರತ್ಯೇಕ ಪಾವತಿ, ಆರೋಗ್ಯ ಪ್ಯಾಕೇಜ್‌ಗಳನ್ನು ಒದಗಿಸಲಾಗುತ್ತದೆ ಎಂದು ಆ್ಯಂಡಿ ಜಸ್ಸಿ ಹೇಳಿದ್ದಾರೆ.





