ದೇಶ
ಕರ್ನಾಟಕ ಚುನಾವಣೆ ಎಫೆಕ್ಟ್; ದಿ ಕೇರಳ ಸ್ಟೋರಿ ಚಿತ್ರದ ತೆರಿಗೆ ವಿನಾಯಿತಿ ಹಿಂಪಡೆದ ಮಧ್ಯಪ್ರದೇಶ ಬಿಜೆಪಿ ಸರ್ಕಾರ
ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election 2023) ಮತದಾನ ಮುಗಿದಿದೆ. ಮತದಾನೋತ್ತರ ಸಮೀಕ್ಷೆಗಳೂ (Exit Polls) ಹೊರಬಿದ್ದಿವೆ. ಬಿಜೆಪಿಗಿಂತ ಕಾಂಗ್ರೆಸ್ ಪಕ್ಷವೇ ಮುನ್ನಡೆ ಸಾಧಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಈ ನಡುವೆ ಚುನಾವಣೆಯ ಜತೆಜತೆಗೇ ಸುದ್ದಿಯಲ್ಲಿ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಸಹ ಮತ್ತೆ ಮುನ್ನೆಲೆಗೆ ಬಂದಿದೆ. ಈ ಚಿತ್ರಕ್ಕೆ ಇದೀಗ ಬಿಜೆಪಿ ಶಾಕ್ ನೀಡಿದೆ!
ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಕೆಲ ದಿನಗಳ ಹಿಂದಷ್ಟೇ ತೆರಿಗೆ ವಿನಾಯಿತಿ ಆದೇಶ ಹೊರಡಿಸಿ ಘೋಷಣೆ ಮಾಡಿತ್ತು. ಇದು ಚಿತ್ರತಂಡದ ವಲಯದಲ್ಲಿಯೂ ಸಂಭ್ರಮಕ್ಕೆ ಕಾರಣವಾಗಿತ್ತು. ಸರ್ಕಾರದ ನಡೆಯನ್ನೂ ಬಹುತೇಕರು ಸ್ವಾಗತಿಸಿದ್ದರು. ಆದರೆ, ಯಾವಾಗ ಕರ್ನಾಟಕದ ಮತದಾನೋತ್ತರ ಸಮೀಕ್ಷೆ ಹೊರಬಿತ್ತೋ ಆ ಕ್ಷಣದಿಂದ ಸಿನಿಮಾ ಮೇಲಿನ ತೆರಿಗೆ ವಿನಾಯಿತಿಯನ್ನು ಸರ್ಕಾರ ಹಿಂಪಡೆದಿದೆ.
ಮೇ 6 ರಂದು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ಶೇರ್ ಮಾಡಿ, ಮಧ್ಯಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ತೆರಿಗೆ ಮುಕ್ತವಾಗಿದೆ ಎಂದು ಘೋಷಿಸಿದ್ದರು. ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದ್ದಕ್ಕಾಗಿ ಬಿಜೆಪಿಯ ಎಲ್ಲ ನಾಯಕರು ಸಿಎಂ ಚೌಹಾಣ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು. ಆದರೆ, ಆದೇಶ ಹೊರಬಿದ್ದ ಕೇವಲ 4 ದಿನಕ್ಕೆ ನೀಡಿದ್ದ ವಿನಾಯಿತಿಯನ್ನು ಸರ್ಕಾರ ಹಿಂಪಡೆದಿದೆ. ಈ ನಿರ್ಧಾರದ ಅಸಲಿಯತ್ತು ಇನ್ನೇನು ಹೊರಬೀಳಬೇಕಿದೆ.
ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಅಣಕಿಸಿದ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಪ್ರೇಮಚಂದ್, ಕರ್ನಾಟಕದಲ್ಲಿ ಮತದಾನ ಮುಗಿದ ತಕ್ಷಣ ಸರ್ಕಾರ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ಮುಕ್ತ ನಿರ್ಧಾರ ಹಿಂಪಡೆದಿದೆ. ಅಂತೆಯೇ, ಮಧ್ಯಪ್ರದೇಶದಲ್ಲಿ ಚುನಾವಣೆಯ ನಂತರ, ಸರ್ಕಾರವು ತಾನೇ ಘೋಷಿಸಿದ ಹಲವು ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತದೆ. ಈ ಮೂಲಕ ಜನರ ಎರಡೂ ಕೈಯಲ್ಲೂ ಲಡ್ಡು ಇಡಲು ಬಯಸುತ್ತಿದೆ. ಆದರೆ, ಸರ್ಕಾರದ ಈ ಆಟಗಳನ್ನು ಜನ ಗಮನಿಸುತ್ತಿದ್ದಾರೆ ಎಂದಿದ್ದಾರೆ.






