Connect with us

Explore

ಒಂದು ದಿನದ ಮಡಿಕೇರಿ ಟ್ರಿಪ್‌ನಲ್ಲಿ ಯಾವೆಲ್ಲಾ ತಾಣಗಳನ್ನು ಕವರ್ ಮಾಡಬಹುದು ಗೊತ್ತಾ?

Published

on

✍️ ಶೀತಲ್ ಬೆಂಗಳೂರು

ಒಂದು ದಿನದ ಮಡಿಕೇರಿ ಟ್ರಿಪ್‌ ಹೇಗೆ ಪ್ಲಾನ್‌ ಮಾಡಬೇಕು? ಯಾವೆಲ್ಲಾ ತಾಣಗಳನ್ನು ಒಂದೇ ದಿನದಲ್ಲಿ ಕವರ್ ಮಾಡಬಹುದು ಎಂಬುದನ್ನು ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

ಮಡಿಕೇರಿ ಪ್ರಕೃತಿಯಿಂದ ಆಶೀರ್ವದಿಸಲ್ಪಟ್ಟಿರುವ ತಾಣವಾಗಿದೆ. ಕರ್ನಾಟಕದ ಮಂದಿ ಸಂಗಾತಿಗಳೊಂದಿಗೆ ಮಧುರವಾದ ಸಮಯವನ್ನು ಕಳೆಯಲು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದೇ ಕೂರ್ಗ್‌. ಈ ಗಿರಿಧಾಮವು ಕಣ್ಮನ ಸೆಳೆಯುವ ಪ್ರವಾಸಿ ಆಕರ್ಷಣೆಗಳಿಂದ ಹೆಚ್ಚು ಜನಪ್ರಿಯವಾಗಿದೆ. ಒಂದು ದಿನದ ಪ್ರವಾಸಕ್ಕೆ ಯೋಗ್ಯವಾದ ತಾಣವು ಹೌದು. ಬೆಂಗಳೂರಿನಿಂದ ಮಡಿಕೇರಿಗೆ 255 ಕಿ.ಮೀ ದೂರದಲ್ಲಿದೆ.

ಬೆಂಗಳೂರಿನಿಂದ ನಿಮ್ಮ ಪ್ರಯಾಣ 5 ಗಂಟೆಗೆ ಶುರುವಾದರೆ ಯಾವೆಲ್ಲಾ ಸುಂದರವಾದ ತಾಣಗಳನ್ನು ನೋಡಿ 11:30 ಕ್ಕೆ ಸರಿಯಾಗಿ ನಿಮ್ಮ ಮನೆಗೆ ತಲುಪಬಹುದು ಗೊತ್ತಾ? ಇಲ್ಲಿದೆ ಮಾಹಿತಿ. ಕುಟುಂಬ ಸಮೇತ ಒಮ್ಮೆ ಪ್ಲಾನ್‌ ಮಾಡಿ.

​ಬೆಳಗ್ಗೆ 5 ಗಂಟೆಗೆ ಶುರುವಾಯಿತು ಪ್ರಯಾಣ

ಮಡಿಕೇರಿಯ ಪ್ರವಾಸ ಮಾಡಲು ಮನಸ್ಸು ಹಾತೊರೆಯುತ್ತಿದ್ದ ಕಾರಣ, ಕುಟುಂಬ ಸಮೇತ ಹೋಗಲು ಅಚ್ಚುಕಟ್ಟಾಗಿ ಪ್ಲಾನ್‌ ಮಾಡಿದೆವು. ಅದರಂತೆ ಬೆಳಗ್ಗೆ 5 ಗಂಟೆಗೆ ಸರಿಯಾಗಿ ನಮ್ಮ ಪ್ರಯಾಣ ಶುರು ಮಾಡಿದೆವು. ದಾರಿ ಮಧ್ಯೆಯಲ್ಲಿ ತಿಂಡಿ ಮುಗಿಸಿ, ನಾಮ್‌ಡ್ರೋಲಿಂಗ್ ಮಠದತ್ತ ಪ್ರಯಾಣ ಮುಂದುವರೆಸಿದೆವು.

​ನಾಮ್‌ಡ್ರೋಲಿಂಗ್ ಮಠ ( ಗೋಲ್ಡನ್‌ ಟೆಂಪಲ್‌ )

ಗೋಲ್ಡನ್‌ ಟೆಂಪಲ್‌ ಎಂದೇ ಕರೆಯಲಾಗುವ ಈ ನಾಮ್‌ಡ್ರೋಲಿಂಗ್ ಮಠವು ಕೊಡಗಿನ ಕುಶಾಲನಗರದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಇದು ಭಾರತದ ಅತಿದೊಡ್ಡ ಟಿಬೆಟಿಯನ್‌ ವಸಾಹತುಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

ಇನ್ನು, ಬೌದ್ದಧರ್ಮಕ್ಕೆ ಮುಡಿಪಾಗಿರುವ ಈ ಆಲಯಕ್ಕೆ ದೇಶದ ನಾನಾ ಭಾಗಗಳಿಂದ ಸಂದರ್ಶಕರು ಭೇಟಿ ನೀಡುತ್ತಾರೆ. ಸಂದರ್ಶಕರು ಅಲ್ಲಲ್ಲಿ ಧ್ಯಾನಿಸುತ್ತಿರುವ ಮತ್ತು ಪ್ರಾರ್ಥಿಸುತ್ತಿರುವುದನ್ನು ಕಂಡೆವು. ಪ್ರಶಾಂತವಾಗಿದ್ದ ವಾತಾವರಣಕ್ಕೆ ಮರುಳಾದೆವು. ಚಿನ್ನದ ಲೇಪನವುಳ್ಳ ಮೂರ್ತಿಗಳು ದೇವಾಲಯದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತಿದ್ದವು. ಇಲ್ಲಿಂದ…

​ಅಬ್ಬಿ ಜಲಪಾತ

ಗೋಲ್ಡನ್‌ ಟೆಂಪಲ್‌ನಿಂದ ಈ ಅಬ್ಬಿ ಜಲಪಾತವು 30 ನಿಮಿಷಗಳ ಪ್ರಯಾಣದ ಅವಧಿ ಹೊಂದಿದೆ. ಮಡಿಕೇರಿಯಿಂದ 6 ಕಿ.ಮೀ ದೂರದಲ್ಲಿ ಈ ಅಬ್ಬೆ ಜಲಪಾತವಿದೆ. ಅಬ್ಬೆ ಜಲಪಾತದ ಸೌಂದರ್ಯ ತುಂಬಾ ಹಿತವಾಗಿತ್ತು. ಮಕ್ಕಳಿಗಂತು ಹಬ್ಬದ ಅನುಭವವೇ ಉಂಟಾಯಿತು. ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುವ ಈ ಜಲಪಾತವನ್ನು ನಿಂತು ವೀಕ್ಷಿಸಿದೆವು ನಂತರ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಅಬ್ಬೆ ಜಲಪಾತವನ್ನು ಕಣ್ತುಂಬಿಕೊಳ್ಳಬಹುದೇ ವಿನಃ ಜಲಕ್ರೀಡೆಗೆ ಅವಕಾಶವಿಲ್ಲ ಎಂಬುದನ್ನು ನಾವು ನಿಮಗೆ ಹೇಳಲೇಬೇಕು.

​ರಾಜಾ ಸೀಟ್

ಅಬ್ಬೆ ಜಲಪಾತದಿಂದ 7.6 ಕಿ.ಮೀ ದೂರದಲ್ಲಿರುವ ರಾಜಾ ಸೀಟ್‌ಗೆ ಪ್ರಯಾಣ ಮುಂದುವರೆಸಿದೆವು. ದಾರಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿದೆವು. ರಾಜಾಸೀಟ್ ತಂಪಾದ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಮಡಿಕೇರಿ ಹಾಗು ಕೊಡಗಿನ ಪ್ರವಾಸಿಗರು ಈ ಆಹ್ಲಾದಕರವಾದ ಸ್ಥಳಕ್ಕೆ ತಮ್ಮ ವಾರಾಂತ್ಯದ ಸಮಯದಲ್ಲಿ ಭೇಟಿ ನೀಡುತ್ತಾರೆ.

ಇಲ್ಲಿ ಅಪಾರ ಸಂಖ್ಯೆಯ ಹೂವುಗಳನ್ನು ನೋಡಬಹುದು. ಮಡಿಕೇರಿ ನಗರದ ವಿಹಂಗಮ ನೋಟವನ್ನು ನೋಡಬಹುದು. ಮೈ ನವಿರೇಳಿಸುವ ಕಂದಕವನ್ನು ಕಂಡು ಮನಸ್ಸು ಪುಳಕಗೊಂಡಿತು. ಮಕ್ಕಳಿಗೆ ಖುಷಿ ನೀಡುವ ಆನೆ, ಡೈನೋಸಾರ್, ಹೆಬ್ಬಾವು, ಜಿಂಕೆಗಳು ಆಟಿಕೆಯ ಆಕರ್ಷಣೆಗಳು ಇಲ್ಲಿವೆ.

ಬೆಂಗಳೂರು

ರಾಜಾಸೀಟ್‌ನ ಸೌಂದರ್ಯವನ್ನು ಸವಿದು ಬೆಂಗಳೂರಿನತ್ತ ಪ್ರಯಾಣ ಪ್ರಾರಂಭಿಸಿದೆವು. ದಾರಿ ಮಧ್ಯೆಯಲ್ಲಿ ಕಾಫಿ ಕುಡಿದು, ಮಕ್ಕಳಿಗೆ ಒಂದಿಷ್ಟು ಆಟಿಕೆಗಳನ್ನು ಖರೀದಿ ಮಾಡಿದೆವು. ಸುಮಾರು 11:30 ಕ್ಕೆ ಸರಿಯಾಗಿ ಮನೆಗೆ ಸುರಕ್ಷಿತವಾಗಿ ತಲುಪಿದೆವು. ಒಟ್ಟಾರೆ ನಮ್ಮ ಮಡಿಕೇರಿಯ ಒಂದು ದಿನದ ಪ್ರವಾಸ ಆಹ್ಲಾದಕರವಾಗಿತ್ತು.

Continue Reading
Home
Videos
Shop
error: Content is protected !!