Connect with us

ಬೆಂಗಳೂರು

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಡ್ರೋನ್‌ ಬಳಕೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Published

on

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ಸುಗಮಗೊಳಿಸುವ ಸಲುವಾಗಿ ಡ್ರೋನ್‌ ಕ್ಯಾಮೆರಾ ಬಳಕೆಯನ್ನು ಶೀಘ್ರವೇ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಸಂಚಾರ ದಟ್ಟಣೆ ಸುಗಮಗೊಳಿಸಲು ಡ್ರೋನ್‌ ಕ್ಯಾಮೆರಾಗಳ ನೆರವು ಪಡೆಯಲಾಗುವುದು ಎಂದು ಹೇಳಿದರು.

ಡ್ರೋನ್‌ ಕಾರ್ಯಾಚರಣೆ ಹೇಗೆ?

ನಗರದಲ್ಲಿಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಶೀಘ್ರವೇ ಡ್ರೋನ್‌ ಕ್ಯಾಮೆರಾಗಳ ಬಳಕೆ ಮಾಡಲಾಗುವುದು. ಈ ಕ್ಯಾಮೆರಾಗಳು ಆ ಪ್ರದೇಶದ ರಸ್ತೆಯಲ್ಲಿ ಹೆಚ್ಚು ದಟ್ಟಣೆಯಿದೆ, ಯಾವ ಸ್ಥಳದಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಸೆರೆಹಿಡಿಯಲಿವೆ. ಈ ದೃಶ್ಯಗಳ ನೇರ ವೀಕ್ಷಣೆಯನ್ನು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಗಮನಿಸಲಾಗುತ್ತಿರುತ್ತದೆ. ಈ ಮೂಲಕ ಜಂಕ್ಷನ್‌ಗಳಲ್ಲಿರುವ ಸಿಬ್ಬಂದಿಗೆ ಮಾಹಿತಿ ರವಾನೆಯಾಗಲಿದ್ದು, ತಕ್ಷಣ ಸಿಬ್ಬಂದಿ ಸಮಸ್ಯೆ ಉಂಟಾಗಿರುವ ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಲು ನೆರವಾಗಲಿದೆ ಎಂದು ವಿವರಿಸಿದರು.

ಮಹಿಳೆಯರ ರಕ್ಷಣೆಗೂ ಡ್ರೋನ್‌ ಬಳಕೆ

ನಗರದಲ್ಲಿ ಹೆಚ್ಚು ಜನದಟ್ಟಣೆ ಇರುವ ಹಾಗೂ ಮಹಿಳೆಯರ ಹೆಚ್ಚು ಓಡಾಟವಿರುವ ಸ್ಥಳಗಳಲ್ಲಿಯೂ ಡ್ರೋನ್‌ ಕ್ಯಾಮೆರಾಗಳ ಕಣ್ಣಿರಲಿವೆ. ಕಮಿಷನರ್‌ ಕಚೇರಿಯ ಕಮಾಂಡೋ ಸೆಂಟರ್‌ ಮೂಲಕ ಕ್ಯಾಮೆರಾಗಳ ನಿರ್ವಹಣೆ ಇರಲಿದೆ. ಕ್ಯಾಮೆರಾದಲ್ಲಿ ಮಹಿಳೆಯರಿಗೆ ಸಮಸ್ಯೆ ಉಂಟಾಗುವ ಅಥವಾ ಅಪರಾಧ ಘಟನೆಗಳು ಜರುಗುತ್ತಿದ್ದರೆ ತಕ್ಷಣ ಅಲರ್ಟ್‌ ಆಗಿ ಪೊಲೀಸರು ಸ್ಥಳಕ್ಕೆ ತೆರಳಲಿದ್ದಾರೆ. ಈ ಮೂಲಕ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಅಲ್ಲದೆ, ಸಂಚಾರ ದಟ್ಟಣೆ ನಿವಾರಣೆ ಸಲುವಾಗಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಸರಕಾರಕ್ಕೆ ವಿಸ್ತೃತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಳೆಗಾಲ ರಕ್ಷಣಾ ಕಾರ್ಯಾಚರಣೆಗೆ ಸಮನ್ವಯದಿಂದ ಕಾರ್ಯ

ಮಳೆಗಾಲದ ಸಂದರ್ಭದಲ್ಲಿ ಬಿಬಿಎಂಪಿ, ಜಲಮಂಡಳಿ, ಪೊಲೀಸ್‌, ಬೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಮಳೆ ಬಂದಾಗ ನಗರದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಗಾರು ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ಮಾತನಾಡಿದ ಅವರು, ‘‘ಮಳೆಗಾಲದಲ್ಲಿ ಎಲ್ಲಿಯೂ ಜಲಾವೃತ ಉಂಟಾಗದಂತೆ ರಾಜಕಾಲುವೆ, ಚರಂಡಿಗಳಲ್ಲಿಹೂಳನ್ನು ತೆರವುಗೊಳಿಸಬೇಕು. ಹೂಳು ತೆರವು ಮಾಡಿರುವ ಕುರಿತಂತೆ ಲೋಕೇಷನ್‌ ಸಹಿತ ಛಾಯಾಚಿತ್ರಗಳನ್ನು ತೆಗೆದು, ನಿಖರವಾದ ಮಾಹಿತಿ ಸಿದ್ಧಪಡಿಸಿಡಬೇಕು,’’ ಎಂದು ತಾಕೀತು ಮಾಡಿದರು.

Continue Reading
Home
Videos
Shop
error: Content is protected !!