Info
ವಿಧಾನಸಭೆ ರಚನೆ ಹೇಗೆ, ಕಾರ್ಯ ನಿರ್ವಹಣಾ ವಿಧಾನ ಹೇಗೆ; ಇಲ್ಲಿದೆ ಮಾಹಿತಿ
ಯಾವುದೇ ರಾಜ್ಯದಲ್ಲಿ ಜನರಿಂದ ನೇರವಾಗಿ ಚುನಾಯಿತರಾಗುವ ಜನಪ್ರತಿನಿಧಿಗಳನ್ನು ಒಳಗೊಂಡ ಸದನವನ್ನು ವಿಧಾನಸಭೆ ಎನ್ನಲಾಗುತ್ತದೆ. ಭಾರತದ 7 ರಾಜ್ಯಗಳು ಎರಡೂ ಶಾಸನ ಸಭೆಗಳನ್ನು ಒಳಗೊಂಡಿದೆ.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಬಗ್ಗೆ ಎಲ್ಲರೂ ಶಾಲೆ, ಕಾಲೇಜಿನಲ್ಲಿ ಓದಿರುತ್ತೇವೆ. ಆದರೆ ಅದು ಓದಿ ಪರೀಕ್ಷೆ ಬರೆದು ಪಾಸ್ ಆಗುವವರೆಗೆ ಮಾತ್ರ ನೆನಪಿನಲ್ಲಿರುತ್ತದೆ. ಇಂದು (ಮೇ 10) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ವಿಧಾನಸಭೆ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯ.
ವಿಧಾನ ಸಭೆ ಎಂದರೇನು?
ಭಾರತದ ಕೆಲವೊಂದು ರಾಜ್ಯಗಳಲ್ಲಿ ಒಂದೇ ಒಂದು ಶಾಸನ ಸಭೆ ಇರುತ್ತದೆ. ಅದರಲ್ಲಿ ವಿಧಾನ ಸಭೆ ಪ್ರಮುಖವಾಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಎರಡು ಶಾಸನ ಸಭೆಗಳಿರುತ್ತವೆ. ಶಾಸಕಾಂಗದ ಮೇಲ್ಮನೆಯನ್ನು ವಿಧಾನ ಪರಿಷತ್ ಎಂದು ಕರೆದರೆ, ಕೆಳಮನೆಯನ್ನು ವಿಧಾನಸಭೆ ಎಂದು ಕರೆಯಲಾಗುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಯಾವುದೇ ರಾಜ್ಯದಲ್ಲಿ ಜನರಿಂದ ನೇರವಾಗಿ ಚುನಾಯಿತರಾಗುವ ಜನಪ್ರತಿನಿಧಿಗಳನ್ನು ಒಳಗೊಂಡ ಸದನವನ್ನು ವಿಧಾನಸಭೆ ಎನ್ನಲಾಗುತ್ತದೆ. ಭಾರತದ 7 ರಾಜ್ಯಗಳು ಎರಡೂ ಶಾಸನ ಸಭೆಗಳನ್ನು ಒಳಗೊಂಡಿದೆ.
ವಿಧಾನಸಭೆ ರಚನೆ ಹೇಗೆ?
ವಿಧಾನಸಭೆ ರಚನೆಯು ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ.
ಸದಸ್ಯರ ಸಂಖ್ಯೆ: ವಿಧಾನಸಭೆಯ ಸದಸ್ಯರ ಸಂಖ್ಯೆಯು ಆಯಾ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಸಂವಿಧಾನದ 170 (1)ನೇ ವಿಧಿಯ ಪ್ರಕಾರ ವಿಧಾನಸಭೆಯ ಸದಸ್ಯರ ಸಂಖ್ಯೆ 500ಕ್ಕಿಂತ ಹೆಚ್ಚು ಹಾಗೂ 60ಕ್ಕಿಂತ ಕಡಿಮೆ ಇರಬಾರದು. ಹಾಗೇ ಸಂವಿಧಾನದ 332ನೇ ವಿಧಿಯ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ವಿಧಾನಸಭೆಯಲ್ಲಿ ಮೀಸಲಾತಿ ನೀಡುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ವಿಧಾನಸಭೆ ಸದಸ್ಯರ ಸಂಖ್ಯೆ 224 ಇದೆ.
ಭಾರತದಲ್ಲಿ ಉತ್ತರಪ್ರದೇಶ ವಿಧಾನಸಭೆಯಲ್ಲಿ 403 ಸದಸ್ಯರಿದ್ದು ಅತಿ ಹೆಚ್ಚು ವಿಧಾಸಭೆ ಸದಸ್ಯರನ್ನು ಹೊಂದಿರುವ ರಾಜ್ಯವಾಗಿದ್ದರೆ, ಸಿಕ್ಕಿಂನಲ್ಲಿ 32 ಸದಸ್ಯರಿದ್ದು ಅತಿ ಕಡಿಮೆ ವಿಧಾನಸಭೆ ಸದಸ್ಯರನ್ನು ಹೊಂದಿರುವ ರಾಜ್ಯವಾಗಿದೆ. ಅದೇ ರೀತಿ ಪ್ರತಿಯೊಂದು ರಾಜ್ಯದಲ್ಲೂ ವಿಧಾನಸಭೆ ಸದಸ್ಯರ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ.
ಚುನಾವಣೆ: ಪ್ರತಿ 5 ವರ್ಷಗಳಿಗೊಮ್ಮೆ ನಿಗದಿಪಡಿಸಿರುವ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಮತದಾರರು ಜನಪ್ರತಿನಿಧಿಗಳನ್ನು ಗುಪ್ತಮತದಾನದ ಮೂಲಕ ಆಯ್ಕೆ ಮಾಡಿ ಕಳಿಸುತ್ತಾರೆ.
ವಿಧಾನಸಭೆ ಸದಸ್ಯರಾಗಲು ಬೇಕಾಗಿರುವ ಅರ್ಹತೆಗಳೇನು
- ಭಾರತದ ಪ್ರಜೆ ಆಗಿರಬೇಕು
- ಕೇಂದ್ರ, ರಾಜ್ಯ, ಸ್ಥಳೀಯ ಸರ್ಕಾರಗಳಲ್ಲಿ ಲಾಭದಾಯಕ ಹುದ್ದೆಯಲ್ಲಿರಬಾರದು
- 25 ವರ್ಷ ತುಂಬಿರಬೇಕು
- ಹುಚ್ಚರು, ದಿವಾಳಿಗಳು, ಅಪರಾಧಿಗಳಾಗಿರಬಾರದು
ವಿಧಾನಸಭೆ ಸದಸ್ಯರ ಅಧಿಕಾರಾವಧಿ
- 172(1) ವಿಧಿಯ ಪ್ರಕಾರ ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸಿದ ನಂತರ 5 ವರ್ಷಗಳವರೆಗೂ ಅಧಿಕಾರದಲ್ಲಿರುತ್ತಾರೆ.
- ಕೆಲವೊಮ್ಮೆ ಅವಧಿಗೆ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಅಷ್ಟೇ ಅಲ್ಲ ತುರ್ತು ಪರಿಸ್ಥಿಯ ಸಮಯದಲ್ಲಿ ಸಂಸತ್ತು ವಿಧಾನಸಭೆಯ ಅಧಿಕಾರಾವಧಿಯನ್ನು ಮುಂದಿನ ಒಂದು ವರ್ಷದವರೆಗೂ ( ಒಟ್ಟು 6 ವರ್ಷಗಳು) ವಿಸ್ತರಿಸುವ ಅಧಿಕಾರ ಹೊಂದಿರುತ್ತದೆ.
- ವಿಧಾನಸಭೆ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡಾ ನೀಡುವ ಮೂಲಕ ತಮ್ಮ ಸ್ಥಾನವನ್ನು ತ್ಯಜಿಸಬಹುದು.
- ಸ್ಪೀಕರ್ ಅನುಮತಿ ಇಲ್ಲದೆ ಸದನಕ್ಕೆ 60 ದಿನಗಳವರೆಗೂ ಗೈರುಹಾಜರಾದರೆ ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ.
ಕೋರಂ ಎಂದರೇನು?
ವಿಧಾನಸಭೆ ತನ್ನ ಕಾರ್ಯ ಕಲಾಪಗಳನ್ನು ನಡೆಸಲು ಹಾಜರಿರಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎನ್ನಲಾಗುತ್ತದೆ. ಕಾರ್ಯಕಲಾಪಗಳು ನಡೆಯಲು 1/10 ರಷ್ಟು ಕೋರಂ ಇರಬೇಕಾಗುತ್ತದೆ. ಉದಾಹರಣೆಗೆ ಕರ್ನಾಟಕ ವಿಧಾನಸಭೆ ಸದಸ್ಯರ ಸಂಖ್ಯೆ 224. ಅದರಲ್ಲಿ 23 ಸದಸ್ಯರಾದರೂ ಸದನದಲ್ಲಿ ಇರಬೇಕು. ಇಲ್ಲವಾದರೆ ಸ್ಪೀಕರ್, ಸದನವನ್ನು ಮುಂದೂಡುವ ಸಾಧ್ಯತೆ ಇದೆ.
ಪ್ರಮಾಣವಚನ ಸೀಕ್ವಾರ
ವಿಧಾನಸಭೆಯು ಒಂದು ವರ್ಷದಲ್ಲಿ ಕನಿಷ್ಠ 2 ಬಾರಿ ಆದರೂ ಸಭೆ ಸೇರಬೇಕು. ಆ ಎರಡು ಅಧಿವೇಶನಗಳ ನಡುವೆ 6 ತಿಂಗಳಿಗಿಂತ ಹೆಚ್ಚು ಕಾಲಾವಕಾಶ ಇರಬಾರದು. ಆದರೆ ರಾಜ್ಯದಲ್ಲಿ ವರ್ಷಕ್ಕೆ ಮೂರು ಬಾರಿ ಅಧಿವೇಶನ ನಡೆಸಲಾಗುತ್ತದೆ. ಫೆಬ್ರವರಿಯಿಂದ ಮೇ ತಿಂಗಳವರೆಗೆ ಬಜೆಟ್ ಅಧಿವೇಶನ, ಜುಲೈನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲದ ಅಧಿವೇಶನ ಹಾಗೂ ನವೆಂಬರ್‌ನಿಂದ ಡಿಸೆಂಬರ್ ಸಮಯದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ. ವಿವಿಧ ವಿಚಾರಗಳ ಬಗ್ಗೆ ಈ ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ.
ವೇತನ ಮತ್ತು ಸವಲತ್ತುಗಳು
ವಿಧಾನಸಭೆ ಸದಸ್ಯರಿಗೆ ಉಚಿತ ದೂರವಾಣಿ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಕ್ಷೇತ್ರ ಭತ್ಯೆ, ಅಧಿವೇಶನದ ಸಮಯದಲ್ಲಿ ದಿನಭತ್ಯೆ, ಕಚೇರಿ ವೆಚ್ಚ, ನಿವೃತ್ತಿ ಆದ ನಂತರ ಪಿಂಚಣಿ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳಿರುತ್ತವೆ. ವಿಧಾನಸಭೆ ಸದಸ್ಯರ ವೇತನ ಮತ್ತು ಸವಲತ್ತುಗಳನ್ನು ಕಾಲ ಕಾಲಕ್ಕೆ ನಿರ್ಧರವಾಗುತ್ತದೆ.
ಸಭಾಧ್ಯಕ್ಷರು
ಸಂವಿಧಾನದ 178ನೇ ವಿಧಿ ಅನ್ವಯ ವಿಧಾನಸಭೆ ಸದಸ್ಯರು ಸದನದ ಕಾರ್ಯ ಕಲಾಪಗಳ ಮುಖಂಡತ್ವ ವಹಿಸಲು ತಮ್ಮಲ್ಲೇ ಒಬ್ಬರನ್ನು ಸಭಾಧ್ಯಕ್ಷರನ್ನಾಗಿ (ಸ್ಪೀಕರ್) ಮತ್ತೊಬ್ಬರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ಸಭಾಧ್ಯಕ್ಷರಾಗಿ ಆಯ್ಕೆ ಆದವರು ಯಾವುದೇ ಪಕ್ಷಕ್ಕೆ ಸೇರಿದರೂ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕಿರುತ್ತದೆ.
ವಿಧಾನಸಭೆಯ ಅಧಿಕಾರ ಹಾಗೂ ಕಾರ್ಯ ನಿರ್ವಹಣೆ
ವಿಧಾನಸಭೆ ರಾಜ್ಯದ ಆಡಳಿತದ ಕೇಂದ್ರ ಬಿಂದುವಾಗಿದೆ.
ಶಾಸನೀಯ ಕಾರ್ಯಗಳು
ಸಂವಿಧಾನದಲ್ಲಿ ನಮೂದಿಸಿರುವ ರಾಜ್ಯಪಟ್ಟಿಯಲ್ಲಿ ಬರುವ ಪೊಲೀಸ್, ಕೃಷಿ, ಆರೋಗ್ಯ, ಸ್ಥಳೀಯ ಸಂಸ್ಥೆಗಳು ಸಮವರ್ತಿಪಟ್ಟಿಯಲ್ಲಿ ಬರುವ ಅಪರಾಧ ದಂಡಸಂಹಿತೆ, ವಿವಾಹ, ವಿಚ್ಛೇದನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಾನೂನು ಮಾಡುವ ಅಧಿಕಾರ ಹೊಂದಿದೆ.
ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಯನ್ನು ಒಪ್ಪಿಗೆಗಾಗಿ ವಿಧಾನಪರಿಷತ್‌ಗೆ ಕಳಿಸಲಾಗುತ್ತದೆ. ಇಲ್ಲಿಯೂ ಮಸೂದೆಗೆ ಒಪ್ಪಿಗೆ ಸಿಕ್ಕಿದ ನಂತರ ರಾಜ್ಯಪಾಲರ ಅನುಮತಿಗೆ ಕಳಿಸಲಾಗುತ್ತದೆ.
ಹಣಕಾಸಿನ ಅಧಿಕಾರಗಳು
ಹಣಕಾಸಿನ ಅಧಿಕಾರಕ್ಕೆ ಸಂಬಂಧಿಸಿದಂತೆ ಇತರ ಎಲ್ಲಾ ಅಧಿಕಾರಗಳಿಗಿಂತ ವಿಧಾನಸಭೆ ಹೆಚ್ಚಿನ ಅಧಿಕಾರ ಹೊಂದಿದೆ.
ಕಾರ್ಯಾಂಗದ ಮೇಲೆ ನಿಯಂತ್ರಣ
ಕಾರ್ಯಾಂಗ ಸಮರ್ಪಕ ಆಡಳಿತ ನೀಡದಿದ್ದಾಗ ಜನರ ಹಿತಾಸಕ್ತಿ ಈಡೇರಿಸುವಲ್ಲಿ ವಿಫಲಗೊಂಡಾಗ ವಿಧಾನಸಭೆ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಕಾರ್ಯಾಂಗವನ್ನು ಅಧಿಕಾರದಿಂದ ಕೆಳಗೆ ಇಳಿಸಬಹುದು.
ಚುನಾವಣೆ ಕಾರ್ಯಗಳು
ವಿಧಾನಸಭೆ ಸದಸ್ಯರು ರಾಷ್ಟ್ರಪತಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ಇಬ್ಬರನ್ನೂ ಆಯ್ಕೆ ಮಾಡಿಕೊಳ್ಳುವ ಅಧಿಕಾರ ಹೊಂದಿದ್ದಾರೆ. ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಕೂಡಾ ವಿಧಾನಸಭೆ ಸದಸ್ಯರಿಗೆ ಇದೆ.
ಸಂವಿಧಾನ ತಿದ್ದುಪಡಿ ಕಾರ್ಯಗಳು
ಭಾರತದ ಸಂವಿಧಾನದಲ್ಲಿ ಸರಳ ತಿದ್ದುಪಡಿ, ಕಠಿಣ ತಿದ್ದುಪಡಿ, ವಿಶೇಷ ತಿದ್ದುಪಡಿ ವಿಧಾನಗಳಿವೆ. ಕೆಲವೊಂದು ಸಂವಿಧಾನ ತಿದ್ದುಪಡಿ ಕಾರ್ಯಗಳಿಗೆ ವಿಧಾನಸಭೆ ಒಪ್ಪಿಗೆ ಬಹಳ ಅಗತ್ಯ.
ವಿವಿಧ ವರದಿಗಳ ಚರ್ಚೆ
ರಾಜ್ಯ ಲೋಕಸೇವಾ ಆಯೋಗ, ಲೋಕಾಯುಕ್ತ ಇತರ ಆಯೋಗಗಳು ನೀಡುವ ವರದಿಗಳನ್ನು ವಿಧಾನಸಭೆ ಚರ್ಚಿಸುತ್ತದೆ. ಇದೆಲ್ಲದರ ಜೊತೆಗೆ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವೇದಿಕೆ ಆಗಿ ವಿಧಾನಸಭೆ ಕಾರ್ಯನಿರ್ವಹಿಸುತ್ತದೆ.






