Connect with us

Special

ಅಪ್ಪನ ಪ್ರೀತಿ – ಅಪ್ಪನು ಬಣ್ಣಿಸಲಾಗದ ಕಾವ್ಯ. ಪದಮಿತಿಗಳೇ ಇಲ್ಲದ ಗದ್ಯ

Published

on

ಅಪ್ಪನು ಬಣ್ಣಿಸಲಾಗದ ಕಾವ್ಯ. ಪದಮಿತಿಗಳೇ ಇಲ್ಲದ ಗದ್ಯ. ಸುಮಧುರ ನುಡಿಯ ಸಾಂಗತ್ಯ. ಎಲ್ಲೆ ಮೀರಿದ ಭಾವ ಬಂಧನ. ಬಾಳಿನುದ್ದಕ್ಕೂ ಪತ್ನಿಯೊಡನೆ ತಾನು ಕಮರಿ ಮಕ್ಕಳಿಗೆ ಕಂಪು ಸೂಸುವ ಕಸ್ತೂರಿ. ಭವಿಷ್ಯದೊಡಲಿಗೆ ಜೀವ ಸವೆಸಿ ಘಮಿಸುವ ಶ್ರಿಗಂಧ. ಅಪ್ಪನ ಸಾಮಿಪ್ಯವೇ ಅಂದ ಚಂದ.

ತನ್ನ ನೋವು ಬಚ್ಚಿಟ್ಟು ನಮಗೆ ಬೆಳಕು ತಂದು ಕೊಟ್ಟಾತ. ಪ್ರಪಂಚದ ಕುಹಕ ನುಡಿಗಳಿಗೆ ಎದುರಾಡದ ಮೌನಿ. ಮನದೊಳಗೆ ಮಕ್ಕಳಿಗಾಗಿ ಗುಡಿಕಟ್ಟಿ, ಪೂಜಿಸಿ ನಲಿದಾಡುವ ಅಪ್ಪ ನಮ್ಮಗಳ ಮನಸ್ಸಿನಲ್ಲಿ ಮನಸ್ಸಿಟ್ಟು ನಮ್ಮ ಬದುಕಿಗೆ ಚೈತನ್ಯ ತುಂಬಿದ ಶಕ್ತಿ. ದುಃಖದುಮ್ಮಾನಗಳನ್ನು ಬದಿಗೊತ್ತಿ ಕಾಲಕಾಲಕ್ಕೆ ಬೇಕಾದ ಸಲಹೆ ಸೂತ್ರಗಳಿನ್ನಿತ್ತು ನಮ್ಮನ್ನ ಬೆಳೆಸಿದ ಜೀವ. ಯಾರಿಗೂ ಕೈಚಾಚದೆ ಸ್ವಾಭಿಮಾನದಿ ಬದುಕಿ. ಮಕ್ಕಳಿಗೂ ಸ್ವಾಭಿಮಾನದ ಬದುಕು ಹೆಣೆದುಕೊಡುವ ಅಪ್ಪನ ಕಾರ್ಯ ಶ್ಲಾಘನೀಯ. ನಾವು ತಪ್ಪು ಮಾಡಿದಾಗ ನಮಗೆ ಮುದ್ದು ಮಾಡದೆ ಬೈದು ತಿದ್ದಿ-ಬುದ್ದಿ ಹೇಳಿದ ಗುರು. ನಯವಾಗಿ ಸಮಸ್ಯೆಗಳನ್ನು ಬಿಡಿಸುವ ಜಾಣ್ಮೆ ಹೊಂದಿದವನು. ಬದುಕಿನ ಬಗ್ಗೆ ಭಯದ ಆತಂಕಗಳನ್ನು ಹೊಂದದವನು. ಮೆದು ಹೃದಯದ ಮೌನದಲ್ಲೇ ಎಲ್ಲ ಅರ್ಥ ಮಾಡಿಸುವ ಕುಶಲತೆಯನ್ನು ಪಡೆದವನು.

ಇಂತಹ ನನ್ನಪ್ಪ ಹುಟ್ಟಿದು ಬಡತನ ಕುಟುಂಬದಲ್ಲಿ. ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ನಮ್ಮ ಅಜ್ಜ ತಿಮ್ಮಪ್ಪ ಗ್ರಾಮದಲ್ಲಿ ಸಣ್ಣಪುಟ್ಟ ಬಡಿಗತನ ಕೆಲಸ ಮಾಡುತ್ತಿದ್ದರಂತೆ. ಕೃಷಿ ಸಲಕರಣೆಗಳಾದ ರಂಟಿ, ಕುಂಟಿ, ನೊಗ, ಚಕ್ಕಡಿ ರಿಪೇರಿ ಮಾಡುವ ಕೆಲಸ ಮಾಡಿ ಬಂದ ಹಣದಲ್ಲಿ ಬದುಕು ನಡೆಸುತ್ತಿದ್ದರು. ಅಜ್ಜಿ ಗಂಗಮ್ಮ ಕೂಲಿ ಕೆಲಸಮಾಡುತ್ತಾ ಮೂರು ಮಕ್ಕಳಿಗೆ ಉತ್ತಮ ವ್ಯಾಸಂಗ ನೀಡುವಲ್ಲಿ ಶ್ರಮ ವಹಿಸಿದರು. ನನ್ನಪ್ಪ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದರು. ಸಾಮಾನ್ಯ ಜ್ಞಾನ ಸಾಕಷ್ಟಿತ್ತು. ಉತ್ತಮ ಗಾಯಕರೂ ಆಗಿದ್ದ ನನ್ನ ತಂದೆ ಆಗಾಗ ಕಥೆ, ಕವಿತೆ ಗಳನ್ನು ಬರೆಯುತ್ತಿದ್ದ ನೆನಪು ಈಗಲೂ ಇದೆ. ಸುಮಾರು ಹತ್ತಾರು ಬಿಳಿಹಾಳೆಯ ಪುಸ್ತಕಗಳು ತುಂಬಿದ್ದ ನೆನಪು. ಆದರೆ ಆ ಸಾಹಿತ್ಯಗಳು ಎಲ್ಲಿ ಮಾಯವಾದವೋ ನಮ್ಮ ಕೈಗೆ ಸಿಗದಾದವು. ಗ್ರಾಮೀಣ ಹವ್ಯಾಸಿ ನಾಟಕಗಳಿಗೆ ಸಂಭಾಷಣೆ, ಹಾಡುಗಳನ್ನು ಇವರಿಂದಲೇ ರಚಿಸಿಕೊಳ್ಳುತ್ತಿದ್ದರು. ಗ್ರಾಮದಲ್ಲಿ ಸಭೆ ಸಮಾರಂಭಗಳು ನಡೆದಾಗ ಇವರಿಂದ ರಚಿತವಾದ ಸ್ವಾಗತ ಗೀತೆಯು ಇವರ ಕಂಠಸಿರಿಯಿಂದಲೇ ಪಾರಂಭ. ದಿನ ಕಳೆದಂತೆ ಆ ಸಾಹಿತ್ಯಗಳು ಬೇರೆಯವರ ರಚನೆಗಳಾದವು. ನಮ್ಮ ತಂದೆ ಕನ್ನಡ ಮತ್ತು ಇಂಗ್ಲೀಷ ಸಾಹಿತಿಗಳ ಸುಮಾರು ೫ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಕೆಲವರು ಓದಿಕೊಡುವೆ ಎಂದು ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.. ಆದರೆ ಆ ಪುಸ್ತಕಗಳನ್ನು ಮರಳಿ ಕೊಡುವ ಜ್ಞಾನ ಅವರಿಗಿದ್ದಿಲ್ಲ. ಉಳಿದ ೩ ಸಾವಿರ ಪುಸ್ತಕಗಳನ್ನು ಸಾವಿಗೂ ಮುಂಚಿನ ಎರಡು ತಿಂಗಳ ಮೊದಲು ಏನೂ ತಿಳಿತೋ ಎನೋ ಎಲ್ಲ ಪುಸ್ತಕಗಳನ್ನು ತಾವು ಕೆಲಸ ಮಾಡುತ್ತಿದ್ದ ಪ್ರೌಢಶಾಲೆಗೆ ದಾನ ಮಾಡಿದರು. ಹೀಗೆ ಅವರು ಮಾಡುವ ಕೆಲಸಗಳು ನನಗೆ ಪ್ರತಿಯೊಂದು ಪಾಠಗಳಾಗಿರುತ್ತಿದ್ದವು. ಇವೆಲ್ಲವೂ ನನ್ನ ಸಂಪೂರ್ಣ ಬೆಳವಣೆಗೆಗೆ ಅಡಿಪಾಯ ಆಗಿದ್ದವು.

ನಾನು ೧೯೯೩ ರಲ್ಲಿ ಪಿ.ಯು.ಸಿ ಯಲ್ಲಿ ಫೇಲಾದಾಗ ಬದುಕು ಕಟ್ಟಿಕೊಳ್ಳುವ ಕೆಲಸವನ್ನು ಕಲಿಸಿದ್ದರು. ನನ್ನ ಚಿತ್ರ ಚಿತ್ರಕಲಾ ತರಬೇತಿಗೆ ಬೇಕಾಗುವ ಎಲ್ಲ ಯೋಜನೆಗಳನ್ನು ಹಾಕಿಕೊಟ್ಟಿದ್ದರು. ಈಗಿನಂತೆ ಪದವಿ ಪಡೆಯದಿದ್ದರೂ ತ್ರಿಕಾಲ ಜ್ಞಾನಿಯಂತೆ ಮಾರ್ಗಸೂಚಿಯಾಗಿದ್ದವರು. ಬದುಕಿನಲ್ಲಿ ಅಪ್ಪನಿತ್ತ ಛಲ, ಅದಮ್ಯ ಭರವಸೆಗಳು ಅಪಾರ. ತನ್ನ ನೋವು ನುಂಗಿ ನಮ್ಮ ಬದುಕಿಗೆ ಭದ್ರ ಬುನಾದಿ ಹಾಕಿದವರು. ನನ್ನಪ್ಪನ ಧೈರ್ಯ ಸಾಹಸ, ಛಲ, ವಿಶ್ವಾಸಗಳು ವೀರನನ್ನು ಮೀರಿಸುವಂತದ್ದು. ಇವರು ಬದುಕನ್ನು ನೋಡುವ ಕ್ರಮವೇ ಬೇರೆಯಾಗಿತ್ತು. ನಾನು ಇಂಜೀನೀಯರ್ ಆಗುವ ಕನಸು ಹೊತ್ತಿದ್ದರು. ಪಿಯುಸಿ ಫೇಲಾಗಿ ಅವರ ಕನಸಿಗೆ ತಣ್ಣೀರೆರಚಿದ್ದೆ. ವಿದ್ಯಾರ್ಥಿ ಇದ್ದಾಗಲೇ ಸಂಘಟನೆ, ಕಲೆ, ಸಮಾಜಮುಖಿ ಕೆಲಸ, ಅಸಹನೀಯ ಜಾತಿ ತಾರತಮ್ಯಗಳ ವಿರುದ್ಧ ಹೋರಾಟ, ಗ್ರಾಮದ ಮಕ್ಕಳಿಗೆ ಉಚಿತ ಟ್ಯೂಷನ್ ಹೇಳುವುದರಲ್ಲಿ ತೊಡಗಿಸಿಕೊಂಡಿದ್ದ ನನ್ನ ನಿಲುವುಗಳ ಬಗ್ಗೆ ಅವರಿಗೆ ಕೆಲವು ಆಕ್ಷೇಪಗಳಿದ್ದವು. ಇವನು ಮುಂದೇನಾಗಿಬಿಡುವನೋ ಎಂಬ ಆತಂಕ ಅವರಿಗೆ ಕಾಡುತ್ತಲಿತ್ತು. ಆದರೂ ನನೆಲ್ಲ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರಿಗೂ ಸಾಹಿತ್ಯ, ಕಲೆ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿ ಇದ್ದ ಕಾರಣ ನನ್ನಲ್ಲಿಯ ಸೃಜನಶೀಲತೆಗಳಿಗೆ ಸುಗಮ ಹಾದಿ ತೋರಿಸಿದರು.

ಅಪ್ಪನಿತ್ತ ಧೈರ್ಯದ ನುಡಿಗಳು ನಮಗೆ ಆಸರೆ ಯಾಗಿ ನಿಂತಿವೆ. ಕಾಲಕಾಲಕ್ಕೆ ಅಪ್ಪನ ಬಿಚ್ಚು ನುಡಿಗಳು ಬದುಕಿನಲ್ಲಿ ಕಲಿಸಿರುವ ಗೌಪ್ಯತೆಗಳು ಬಹುಶಃ ಯಾವ ಯುನಿವರ್ಶಿಟಿಗಳಲ್ಲಿಯೂ ಸಿಗುವುದಿಲ್ಲ. ಅಪ್ಪನು ಹೇಳಿಕೊಡುವ ಪಾಠಗಳೂ ಯಾವ ಪಾಠಶಾಲೆಯಲ್ಲಿಯೂ ಇಲ್ಲ. ಸ್ವತಹಃ ಅಪ್ಪನನ್ನು ಸೃಷ್ಟಿಸಿದ ಬ್ರಹ್ಮನೂ ಸಹ ಅವನ ಗುಣಗಳಿಗೆ ಹೊಟ್ಟೆಕಿಚ್ಚು ಪಡುವಷ್ಟು ಮಹಾದಾತ ನನ್ನಪ್ಪ.

ನನ್ನಪ್ಪನೇ ನನಗೆ ಮೊದಲ ಗುರು. ಪ್ರಾಯಶಃ ನಾನು ಬದುಕಿರುವವರೆಗೂ ಕಲಿಯಬಹುದಾದ ಪಾಠಗಳನ್ನು ಕಲಿಸಿ-ಉಳಿಸಿ ಹೋಗಿದ್ದಾರೆ. ಈಗ ಅವರಿಲ್ಲ. ಆದರೆ ದಿನ ನಿತ್ಯ ಅಪ್ಪ ನನ್ನ ಕಲೆಯ ಜೊತೆ ಇದ್ದಾರೆ ಎಂದೇ ಬದುಕುತ್ತಿರುವೆ. ನಾನಿರುವವರೆಗೂ ನನ್ನಪ್ಪನ ಬದ್ಧತೆಯ ಕನಿಷ್ಠವಾದರೂ ಬದುಕಲು ಪ್ರಯತ್ನಿಸುತ್ತಿರುವೆ.

ನನ್ನ ತಂದೆ ನನಗೆ ನೂರು ಭಾವ. ನೂರು ಶಕ್ತಿ ಆಗಿದ್ದರು.ಯಾವುದೇ ಸಮಸ್ಯೆ ಬಂದಾಗ ಆತ್ಮ ವಿಶ್ವಾಸ ತುಂಬುತ್ತಿದ್ದರು. ಬದುಕಿರುವವರೆಗೂ ಅಪ್ಪನ ಜೊತೆ ಆತ್ಮೀಯತೆ ತುಂಬಾ ಇತ್ತು. ಯಾವತ್ತು ರಾಜಿಯಾಗದ ಸಾರ್ವಜನಿಕ ಬದುಕನ್ನು, ತಾಳ್ಮೆಯನ್ನು ಅಪ್ಪನಿಂದ ಕಲಿತೆ. ತೀವ್ರತನ ಬಡತನವಿದ್ದರೂ ಅವರ ಅನುಭವ ಮತ್ತು ತಿಳಿವಳಿಕೆಯಿಂದ ನಮ್ಮ ಬದುಕನ್ನು ಕಟ್ಟಲು ಹೆಗಲು ಕೊಟ್ಟರು. ಅವರಲ್ಲಿಯ ಸಂವೇದನಾ ಶೀಲತೆಯ ಮನಸ್ಸು, ಒಬ್ಬ ತಂದೆಯಾಗಿ ಕಾರ್ಯ ನಿರ್ವಹಿಸಿ ನನ್ನ ಸಾಧನೆಗೆ ಮೆಟ್ಟಿಲುಗಳನ್ನು ಕಟ್ಟುತ್ತಿದ್ದರು. ಇದಲ್ಲದೇ ತಮ್ಮ ಬಿಡುವಿಲ್ಲದ ಉದ್ಯೋಗದ ಮಧ್ಯೆಯೂ ಹತ್ತಾರು ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಸಹಾಯ ಹಸ್ತ ನೀಡಿದ್ದಾರೆ.

ಮುಂದೆ ಸಾಗಬೇಕಾದ ದಾರಿಯನ್ನು ಬದುಕಿನ ಪಾಠವನ್ನು ಕಲಿಸಿದ ನನ್ನಪ್ಪನ ಪ್ರೀತಿ ನನ್ನೊಳಗೆ ಭದ್ರವಾಗಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದಾನೆ.

ಸಂಪೂರ್ಣ ನನ್ನ ಕಲಾ-ಸಾಹಿತ್ಯ-ಛಾಯಾಗ್ರಹಣ ಸಾಧನೆಗೆ ನೀರೆರೆದ ನನ್ನಪ್ಪ ಈಗ ನನ್ನ ಬೆಳವಣೆಗೆಯನ್ನು ನೋಡಲು ಅವರಿಲ್ಲ. ಈ ಕೊರಗು ಈಗಲೂ ಕಾಡುತ್ತಲಿದೆ. ಆದರೆ ನನ್ನ ಕಲಾಕೃತಿಗಳಲ್ಲಿ, ರೇಖೆಗಳಲ್ಲಿ, ಬರಹಗಳಲ್ಲಿ, ಸೆರೆಹಿಡಿಯುವ ಛಾಯಾಚಿತ್ರಗಳಲ್ಲಿ, ನಾನು ಮಾಡುವ ಉತ್ತಮ ಕೆಲಸಗಳಲ್ಲಿ ನನ್ನ ಅಪ್ಪನನ್ನು ಕಾಣುತ್ತಿರುವೆ.

Continue Reading
Home
Videos
Shop
error: Content is protected !!